ಡಿಜೆ ಹಳ್ಳಿ ಗಲಭೆ ಪ್ರಕರಣ: ಆರೋಪಿ ಇಮ್ರಾನ್ ಅಹ್ಮದ್ ಜಾಮೀನು ಅರ್ಜಿ ಹೈಕೋರ್ಟ್‍ನಿಂದ ವಜಾ

Update: 2022-01-17 17:04 GMT

ಬೆಂಗಳೂರು, ಜ.17: ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ)ದ ಕೆ.ಜಿ.ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.   

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. 

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಅನುಸಾರ ಅರ್ಜಿದಾರರಾದ  ಇಮ್ರಾನ್ ಅಹ್ಮದ್ ಅವರು ಗಲಭೆ ನಡೆಯುವ ಮೊದಲು ಸಭೆಯಲ್ಲಿ ಭಾಗಿಯಾಗಿದ್ದರು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಅರ್ಜಿದಾರರು ಎಸ್‍ಡಿಪಿಐ ಅಧ್ಯಕ್ಷರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಬೆದರಿಕೆ ಹಾಕುವ ಮೂಲಕ ವಿಚಾರಣೆಗೆ ಅಡ್ಡಿಪಡಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಅರ್ಜಿದಾರರ ವಿರುದ್ಧದ ಆರೋಪವು ಪ್ರಾಥಮಿಕವಾಗಿ ಸಾಬೀತಾಗಿದೆ. ನಂಬಲು ಕೂಡ ಸೂಕ್ತ ಆಧಾರಗಳಿವೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯ ಹೊರಗಡೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚುವಾಗ ಅವರು ಭಾಗವಹಿಸಿದ್ದರು  ಎಂದು ದೋಷಾರೋಪ ಪಟ್ಟಿಯಲ್ಲಿ ಇರುವ ಅಂಶಗಳು ಸೂಚಿಸುತ್ತವೆ. ಹೀಗಾಗಿ, ಇಮ್ರಾನ್ ಅಹ್ಮದ್ ಜಾಮೀನಿನ ಮೇಲೆ ಬಿಡುಗಡೆಯಾಗುವ ಅರ್ಹತೆಯನ್ನು ಹೊಂದಿಲ್ಲ ಎಂದು ನ್ಯಾಯಾಲಯವೂ ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News