ಅಫ್ಗಾನ್ ನ ವಾಯವ್ಯ ಪ್ರಾಂತದಲ್ಲಿ ಪರೇಡ್ ಮೂಲಕ ಬಲಪ್ರದರ್ಶಿಸಿದ ತಾಲಿಬಾನ್

Update: 2022-01-17 18:13 GMT

ಕಾಬೂಲ್, ಜ.17: ಅಫ್ಗಾನಿಸ್ತಾನದ ವಾಯವ್ಯ ಪ್ರಾಂತದಲ್ಲಿ ಕಳೆದ ವಾರ ನಡೆದಿದ್ದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ತಾಲಿಬಾನ್ ಪಡೆ ಪರೇಡ್ ನಡೆಸುವ ಮೂಲಕ ತನ್ನ ಬಲ ಪ್ರದರ್ಶಿಸಿದೆ ಎಂದು ವರದಿಯಾಗಿದೆ.

    ವಾಯವ್ಯದ ಫರ್ಯಾಬ್ ಪ್ರಾಂತದ ರಾಜಧಾನಿ ಮೇಮಾನದಲ್ಲಿ ಕಳೆದ ವಾರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕ್ ತಾಲಿಬಾನ್ ಕಮಾಂಡರ್‌ನನ್ನು ತಾಲಿಬಾನ್ ಪಡೆ ಬಂಧಿಸಿತ್ತು. ಇದನ್ನು ವಿರೋಧಿಸಿ ವಾರಾಂತ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಇದರಿಂದ ಅಲ್ಲಿ ಅಶಾಂತಿಯ ಪರಿಸ್ಥಿತಿ ನೆಲೆಸಿದ್ದು ಉಜ್ಬೇಕ್ ಮತ್ತು ಪಸ್ತೂನ್ ಸಮುದಾಯದವರ ಮಧ್ಯೆ ಉದ್ವಿಗ್ನತೆಯ ಭೀತಿ ಎದುರಾಗಿದ್ದು ಪ್ರತಿಭಟನೆಯನ್ನು ಹತ್ತಿಕ್ಕಲು ಹೆಚ್ಚುವರಿ ಪಡೆಯನ್ನು ರವಾನಿಸಲಾಗಿತ್ತು.

 ನೆರೆಯ ಪ್ರಾಂತದಿಂದ ಹೆಚ್ಚುವರಿ ಪಡೆಯನ್ನು ನಿಯೋಜಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನೆಯ ಹಿರಿಯ ಅಧಿಕಾರಿ ಲತೀಫುಲ್ಲಾ ಹಕೀಮಿಯನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ರವಿವಾರ ಸೇನೆ ನಡೆಸಿದ ಪರೇಡ್‌ನಲ್ಲಿ ಭಾರೀ ಶಸ್ತ್ರಾಸ್ತ್ರ ಸಜ್ಜಿತ ತಾಲಿಬಾನ್ ಯೋಧರು ಟ್ರಕ್ ಮತ್ತು ಶಸ್ತ್ರಸಜ್ಜಿತ ವಾಹನಗಳಲ್ಲಿ(ಇವನ್ನು ಈ ಹಿಂದಿನ ಅಫ್ಗಾನ್ ಸರಕಾರ ಮತ್ತು ಅಮೆರಿಕದ ಪಡೆಗಳಿಂದ ವಶಪಡಿಸಿಕೊಳ್ಳಲಾಗಿದೆ) ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸೇನೆಯ ಬಲಪ್ರದರ್ಶನ ನಡೆಸಿದರು ಎಂದು ವರದಿಯಾಗಿದೆ.

     2 ದಿನದ ಹಿಂದೆ ಪ್ರತಿಭಟನೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿತ್ತು, ಆದರೆ ಈಗ ಸಹಜಸ್ಥಿತಿ ಮರಳಿದೆ. ಇಲ್ಲಿರುವ ಪ್ರಮುಖ ಸಮಸ್ಯೆಯೆಂದರೆ ನಿರುದ್ಯೋಗ ಎಂದು ಸ್ಥಳೀಯರು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಅಫ್ಗಾನಿಸ್ತಾನದ ಅಧಿಕಾರ ಕೈವಶ ಮಾಡಿಕೊಂಡ ಬಳಿಕ ತಾಲಿಬಾನ್‌ಗೆ ಹಲವು ಸಮಸ್ಯೆಗಳು ಎದುರಾಗಿವೆ. ಕುಸಿತದ ಅಂಚಿಗೆ ತಲುಪಿರುವ ಆರ್ಥಿಕತೆ, ಆಹಾರದ ಕೊರತೆ ಬಿಗಡಾಯಿಸಿರುವ ಜೊತೆಗೆ, ದೂರದ ಪ್ರಾಂತದಲ್ಲಿ ಆಡಳಿತ ನಿರ್ವಹಣೆಯಲ್ಲಿ ಸಮನ್ವಯ ಸಾಧಿಸುವ ಸಮಸ್ಯೆ ಎದುರಾಗಿದೆ. ಸ್ಥಳೀಯ ಕಮಾಂಡರ್‌ಗಳು ಮೇಲಧಿಕಾರಿಗಳ ಆದೇಶಕ್ಕೆ ಕಾಯದೆ ತಮ್ಮಷ್ಟಕ್ಕೇ ಆದೇಶ ಜಾರಿಗೊಳಿಸುತ್ತಿದ್ದು , ಅಶಿಸ್ತು ತೋರಿರುವ ಆರೋಪದಲ್ಲಿ ಇದುವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಕಮಾಂಡರ್‌ಗಳನ್ನು ವಜಾಗೊಳಿಸಲಾಗಿದೆ.

ಕಾನೂನನ್ನು ಎಲ್ಲರೂ ಪಾಲಿಸಬೇಕು ಮತ್ತು ಭದ್ರತೆಗೆ ತೊಡಕಾಗುವ ಕಾರ್ಯವನ್ನು ಯಾರೂ ನಡೆಸಬಾರದು ಎಂಬ ಸಂದೇಶ ರವಾನಿಸಲು ಸೇನೆಯ ಪರೇಡ್ ನಡೆಸಲಾಗಿದೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News