ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ನಿಧನ

Update: 2022-01-17 18:41 GMT
photo: (Twitter/Narendra Modi)

ಕೊರಾಪುಟ್: ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಸಾಮಾಜಿಕಕಾರ್ಯಕರ್ತೆ ಶಾಂತಿ ದೇವಿ (88) ಒಡಿಶಾದ ರಾಯಗಢ ಜಿಲ್ಲೆಯ ಗುನುಪುರದ ತಮ್ಮ ಸ್ವಗೃಹದಲ್ಲಿ ರವಿವಾರ ತಡ ರಾತ್ರಿ ನಿಧನರಾಗಿದ್ದಾರೆ.

ಎದೆ ನೋವು ಹಾಗೂ ಪ್ರಜ್ಞೆ ಕಳೆದುಕೊಂಡ ಹಿನ್ನೆಲೆಯಲ್ಲಿ ಶಾಂತಿ ದೇವಿ ಅವರನ್ನು ಗುನುಪುರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತಂದು ದಾಖಲಾಗಿತ್ತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಕಟಿಸಿದರು.

 ‘‘ಶಾಂತಿ ದೇವಿ ಅವರು ಬಡವರು ಹಾಗೂ ದುರ್ಬಲರ ಧ್ವನಿಯಾಗಿ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ. ದುಃಖವನ್ನು ತೊಡೆದು ಹಾಕಲು, ಆರೋಗ್ಯಕರ ಹಾಗೂ ಉತ್ತಮ ಸಮಾಜವನ್ನು ರೂಪಿಸಲು ಅವರು ಸ್ವಾರ್ಥರಹಿತವಾಗಿ ಕಾರ್ಯ ನಿರ್ವಹಿಸಿದರು. ಅವರ ಅಗಲಿಕೆ ನೋವು ತಂದಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೊರಾಪುಟ್ ಸಂಸದ ಸಪ್ತಗಿರಿ ಶಂಕರ್ ಉಲಕ ಹಾಗೂ ಇತರರು ಶಾಂತಿ ದೇವಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಂತಿ ದೇವಿ ಅವರು 1934 ಎಪ್ರಿಲ್ 18ರಂದು ಬಾಲಸೋರೆಯಲ್ಲಿ ಜನಿಸಿದರು. ಅವರು 17 ವರ್ಷದಲ್ಲಿಯೇ ಗಾಂಧಿ ಅನುಯಾಯಿ ರತನ್ ದಾಸ್ ಅವರನ್ನು ವಿವಾಹವಾದರು. ಅನಂತರ ಕೋರಾಪುಟ್ ಜಿಲ್ಲೆಗೆ ಸ್ಥಳಾಂತರಗೊಂಡರು.

ಅವರು ರಾಯಗಢ ಜಿಲ್ಲೆಯ ಗೋಬಾರಪಲ್ಲಿನ್ ಗ್ರಾಮದಲ್ಲಿ ಆಶ್ರಮ ಆರಂಭಿಸಿದ್ದರು. ಬುಡಕಟ್ಟು ಬಾಲಕಿಯರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕಾಗಿ ಅವಿರತ ಶ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News