ಗಾಂಜಾ ಮಾರಾಟ ಆರೋಪ; ಸಿಎಂ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರ ಬಂಧನ

Update: 2022-01-18 11:45 GMT
ಬಂಧಿತ ಆರೋಪಿಗಳು

ಬೆಂಗಳೂರು, ಜ.18: ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆರೋಪದಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಕೋರಮಂಗಲ ಪೊಲೀಸ್ ಠಾಣೆಯ ಕಾನ್‌ ಸ್ಟೇಬಲ್‌ಗಳಾದ ಶಿವಕುಮಾರ್ ಹಾಗೂ ಸಂತೋಷ್ ಬಂಧಿತರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ಆರೋಪಿಗಳಿಬ್ಬರು, ಇಲ್ಲಿನ ಆರ್‌ಟಿನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದರು.

ಹಲವು ದಿನಗಳಿಂದ ಪೆಡ್ಲರ್‌ಗಳಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಇನ್ನೂ, ಯಾರಿಗೂ ಅನುಮಾನ ಬಾರದಿರಲೆಂದು ಮುಖ್ಯಮಂತ್ರಿ ಮನೆ ಸಮೀಪದಲ್ಲಿ ಆನ್‌ಲೈನ್ ಡೆಂಝೋ ಡೆಲಿವರಿ ಮೂಲಕ ಮಾದಕ ವಸ್ತು ತರಿಸಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಗಾಂಜಾ ತರಿಸಿಕೊಂಡಿದ್ದಾಗ ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಪಾಸಣೆಗೊಳಪಡಿಸಿದಾಗ ಪೊಲೀಸರು ಎಂದು ಗೊತ್ತಾಗಿದೆ. ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸಿದ್ದರು ಎಂಬುವುದು ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಇಬ್ಬರು ಕಾನ್ ಸ್ಟೇಬಲ್‌ಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News