ಎನ್ಡಿಎ ಪ್ರವೇಶಕ್ಕೆ 19 ಮಹಿಳೆಯರಿಗೆ ಅವಕಾಶ: ಕಾರಣ ವಿವರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2022-01-18 18:09 GMT

 ಹೊಸದಿಲ್ಲಿ,ಜ.18: ತನ್ನ ಆದೇಶವಿದ್ದಾಗ್ಯೂ 2022ನೇ ಸಾಲಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯಲ್ಲಿ ಪ್ರವೇಶಕ್ಕಾಗಿ ಮಹಿಳೆಯರ ಸಂಖ್ಯೆಯನ್ನು 19ಕ್ಕೆ ನಿರ್ಬಂಧಿಸಿರುವುದು ಏಕೆ ಎನ್ನುವುದನ್ನು ವಿವರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರಕ್ಕೆ ಸೂಚಿಸಿದೆ. ಕಳೆದ ವರ್ಷವೂ ಎನ್‌ಡಿಎಯಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶವನ್ನು 19ಕ್ಕೆ ಸೀಮಿತಗೊಳಿಸಲಾಗಿತ್ತು.

 ಎನ್‌ಡಿಎ ಪರೀಕ್ಷೆ 2021,ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಮತ್ತು ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ಗಾಗಿ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಿದ್ದ,ಮಹಿಳೆಯರು ಸೇರಿದಂತೆ ಅಭ್ಯರ್ಥಿಗಳ ಒಟ್ಟು ಸಂಖ್ಯೆಯ ಕುರಿತು ಅಂಕಿಅಂಶಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ ಅವರ ಪೀಠವು ಕೇಂದ್ರಕ್ಕೆ ಸೂಚಿಸಿತು.

ಯುಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯಂತೆ ಮಹಿಳೆಯರ ಸಂಖ್ಯೆಯನ್ನು 19ಕ್ಕೆ ನಿಗದಿಗೊಳಿಸಿರುವುದು ಏಕೆ ಎನ್ನುವುದನ್ನು ಸರಕಾರವು ವಿವರಿಸಬೇಕು ಎಂದು ಪೀಠವು ಕೇಂದ್ರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ತಿಳಿಸಿತು.

ಇದು 2021ರ ಪರೀಕ್ಷೆಗೆ ನಿಗದಿಗೊಳಿಸಿದ್ದ ಸಂಖ್ಯೆಯೇ ಆಗಿದೆ. ಮೂಲಸೌಕರ್ಯ ಸಮಸ್ಯೆಗಳಿಂದಾಗಿ ಮಹಿಳೆಯರಿಗೆ ಪ್ರವೇಶವು ಕಡಿಮೆಯಾಗಲಿದೆ ಎಂದು ನೀವು ಕಳೆದ ವರ್ಷ ಹೇಳಿದ್ದೀರಿ. ಈಗ 2022ನೇ ಸಾಲಿಗೂ ನೀವು ಅಷ್ಟೇ ಸಂಖ್ಯೆಯಲ್ಲಿ ಮಹಿಳೆಯರನ್ನು ಎನ್‌ಡಿಎಗೆ ಸೇರಿಸಿಕೊಳ್ಳುವುದಾಗಿ ಪ್ರಸ್ತಾವಿಸಿದ್ದೀರಿ. ನೀವು ಈ ಸಂಖ್ಯೆಯನ್ನು ಏಕೆ ನಿಗದಿಗೊಳಿಸಿದ್ದೀರಿ? ನೀವು ಇದನ್ನು ವಿವರಿಸಬೇಕು. ಬರಲಿರುವ ಎಲ್ಲ ವರ್ಷಗಳಿಗೂ 19ರ ಸಂಖ್ಯೆ ಅನ್ವಯವಾಗುವುದು ಸಾಧ್ಯವಿಲ್ಲ. ಅದೊಂದು ತಾತ್ಕಾಲಿಕ ಕ್ರಮವಾಗಿತ್ತಷ್ಟೇ ಎಂದು ಪೀಠವು ಹೇಳಿತು.

ಈ ಸಂಬಂಧ ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದ ಸರ್ವೋಚ್ಚ ನ್ಯಾಯಾಲಯವು,ಮುಂದಿನ ವಿಚಾರಣೆಯನ್ನು ಮಾ.6ಕ್ಕೆ ನಿಗದಿಗೊಳಿಸಿತು.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಸವೋಚ್ಚ ನ್ಯಾಯಾಲಯವು ಆ ವರ್ಷದ ನವಂಬರ್‌ನಲ್ಲಿ ನಡೆಯಲಿದ್ದ ಎನ್‌ಡಿಎ ಪ್ರವೇಶ ಪರೀಕ್ಷೆಗೆ ಹಾಜರಾಗಲು ಮೊದಲ ಬಾರಿಗೆ ಮಹಿಳೆಯರಿಗೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News