ಪಿಎಸ್ಸೈ ಪರೀಕ್ಷೆಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ತಡೆಯಿರಿ: ಸಿಎಂಗೆ ರಿಝ್ವಾನ್‍ ಅರ್ಶದ್‍ ಪತ್ರ

Update: 2022-01-19 06:13 GMT

ಬೆಂಗಳೂರು, ಜ.19: ಪೊಲೀಸ್ ಸಬ್ ಇನ್ ಸ್ಪೆಕ್ಟರ್(ಪಿಎಸ್ಸೈ) ನೇಮಕಾತಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದ್ದು, ಇದನ್ನು ಪರಿಹರಿಸುವಂತೆ ಒತ್ತಾಯಿಸಿ ಶಿವಾಜಿ ನಗರ ಶಾಸಕ ರಿಝ್ವಾನ್ ಅರ್ಶದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಪಿಎಸ್ಸೈ ಪರೀಕ್ಷೆಯ ಪೇಪರ್ ಒಂದರಲ್ಲಿ ಕನ್ನಡ ಸಾಲುಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡಲು ಹಾಗೂ ಇಂಗ್ಲಿಷ್ ಸಾಲುಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಕೇಳಲಾಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪ್ರಾಥಮಿಕ ಜ್ಞಾನ ಇರುತ್ತದೆಯಾದರೂ ಇಂಗ್ಲಿಷ್ ಗೆ ಅನುವಾದ ಮಾಡುವುದು ಅವರಿಗೆ ಕಷ್ಟವಾಗುತ್ತದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಹಿಂದೆ ಬಿದ್ದು ಸಮಾನ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಸಿಗುವಂತೆ ಖಾತರಿಪಡಿಸಬೇಕಾದ್ದು ಸರಕಾರದ ಕರ್ತವ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲೂ ಭಾಷೆಗೆ ಸಂಬಂಧಿಸಿದ ಪರೀಕ್ಷೆ ಅಥವಾ ಪ್ರಶ್ನೆಗಳು ಇದ್ದರೂ ಅವುಗಳನ್ನು ಕೇವಲ ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆ. ಅದರ ಅಂಕಗಳನ್ನು ಅಂತಿಮ ಆಯ್ಕೆಗೆ ಪರಿಗಣಿಸುವುದಿಲ್ಲ. ಆದರೆ ಪಿಎಸ್ಸೈ ಪರೀಕ್ಷೆಯಲ್ಲಿ ಮಾತ್ರ ಇಂತಹ ತದ್ವಿರುದ್ಧ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಆದ್ದರಿಂದ ಇದನ್ನು ಪರಿಶೀಲಿಸಿ ಸಂಬಂಧಪಟ್ಟವರಿಗೆ ಈ ಇಂಗ್ಲಿಷ್ ಅನುವಾದ ಪ್ರಶ್ನೆಯನ್ನು ಕೈಬಿಡುವಂತೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ರಿಝ್ವಾನ್ ಅರ್ಶದ್‍ ಒತ್ತಾಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News