ಅಗಾಧ ಅಂತರಾಷ್ಟ್ರೀಯ ಸಾಲದ ಸುಳಿಯಲ್ಲಿ ಶ್ರೀಲಂಕಾ : ದಿನ ಬಳಕೆಯ ವಸ್ತುಗಳ ತೀವ್ರ ಕೊರತೆ

Update: 2022-01-19 15:27 GMT
Photo : PTI

ಕೊಲಂಬೊ, ಜ.19: ಅಗಾಧ ಪ್ರಮಾಣದ ಅಂತರಾಷ್ಟ್ರೀಯ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಈ ವರ್ಷಾಂತ್ಯದೊಳಗೆ 7.3 ಬಿಲಿಯನ್ ಡಾಲರ್ ವಿದೇಶಿ ಸಾಲ ಮರುಪಾವತಿಸುವ ಒತ್ತಡದಲ್ಲಿದೆ. ಒಂದು ವೇಳೆ ಸಾಲ ಮರುಪಾವತಿಸದಿದ್ದರೆ ಪ್ರತಿಷ್ಟೆಗೆ ಹಾನಿಯಾಗುವ ಜತೆಗೆ, ಮುಂದಿನ ದಿನಗಳಲ್ಲಿ ಕೈಗೆಟಕುವ ದರಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್ಥಿಕ ನೆರವು ಪಡೆಯಲು ಕಷ್ಟವಾಗಲಿದೆ ಎಂದು ಮೂಲಗಳು ಹೇಳಿವೆ.

  ಡಿಸೆಂಬರ್‌ನಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ ಐತಿಹಾಸಿಕ ಕನಿಷ್ಟ ಮಟ್ಟವಾದ 1.6 ಬಿಲಿಯನ್ ಡಾಲರ್‌ಗೆ ಕುಸಿದಿತ್ತು. ಪ್ರವಾಸೋದ್ಯಮ ಮುಖ್ಯ ಆದಾಯ ಮೂಲವಾಗಿರುವ ಶ್ರೀಲಂಕಾಕ್ಕೆ ಕೊರೋನ ಸೋಂಕು ಮಾರಕ ಪ್ರಹಾರ ನೀಡಿತ್ತು. ಆದರೆ, ಚೀನಾ 1.5 ಬಿಲಿಯನ್ ಡಾಲರ್ ಸಾಲ ವಿನಿಮಯಕ್ಕೆ (ಶ್ರೀಲಂಕಾ ಪಾವತಿಸಬೇಕಿದ್ದ ಸಾಲವನ್ನು ಚೀನಾ ಪಾವತಿಸಿದ್ದು) ಸಮ್ಮತಿಸಿದ್ದು ಕೊಂಚ ನಿರಾಳತೆ ತಂದಿತ್ತು. ಆದರೆ, ಇದೀಗ ಸಾಲ ಮರುಪಾವತಿ ಅಥವಾ ದೈನಂದಿನ ಅಗತ್ಯಗಳ ಆಮದು- ಈ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಸಂದಿಗ್ಧತೆ ಎದುರಾಗಿದೆ. ದೈನಂದಿನ ಬಳಕೆಯ ವಸ್ತುಗಳಾದ ಹಾಲು, ಆಹಾರ ವಸ್ತುಗಳು, ಎಲ್‌ಪಿಜಿ ಗ್ಯಾಸ್, ವೈದ್ಯಕೀಯ ಉತ್ಪನ್ನಗಳ ವ್ಯಾಪಕ ಕೊರತೆ ಎದುರಾಗಿದ್ದು ಇದೀಗ 70ರ ದಶಕದಲ್ಲಿ ಕಂಡುಬರುತ್ತಿದ್ದ ಎತ್ತಿನ ಗಾಡಿಯಲ್ಲಿ ಸೀಮೆ ಎಣ್ಣೆ ಮಾರಾಟ ಮಾಡುವ ದೃಶ್ಯ ಮತ್ತೆ ಮರುಕಳಿಸಿದೆ.

  ಸೇವಾ ಬಾಂಡ್ ಪಾವತಿಗಳನ್ನು ಮುಂದೂಡಲು ಮತ್ತು ಅದರ ಬದಲು ದೇಶದ ಪ್ರಜೆಗಳಿಗೆ ಆಹಾರ, ವೈದ್ಯಕೀಯ ವಸ್ತುಗಳ ಖರೀದಿಗೆ ವಿದೇಶಿ ವಿನಿಯಮ ದಾಸ್ತಾನನ್ನು ಬಳಸುವಂತೆ ಈ ತಿಂಗಳ ಆರಂಭದಲ್ಲಿ ಸಿಲೋನ್ ವಾಣಿಜ್ಯ ಮಂಡಳಿ ಸರಕಾರವನ್ನು ಒತ್ತಾಯಿಸಿದ್ದರು. ಲಭ್ಯ ವಿದೇಶ ವಿನಿಮಯವನ್ನು ಜನಸಾಮಾನ್ಯರ ಅವಶ್ಯಕತೆಗೆ ಬಳಸಬೇಕು. ಯಾಕೆಂದರೆ ದೇಶದ ಪ್ರಮುಖ ಆದಾಯ ಮೂಲ ಪ್ರವಾಸೋದ್ಯಮ. ಒಂದು ವೇಳೆ ಇಲ್ಲಿ ಆಹಾರಕ್ಕೆ ಕೊರತೆ ಎದುರಾಗಿದೆ ಎಂಬ ಸಂದೇಶ ವಿಶ್ವಕ್ಕೆ ರವಾನೆಯಾದರೆ ಪ್ರತಿಕೂಲ ಪರಿಣಾಮವಾಗಬಹುದು ಎಂದು ಸಿಲೋನ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ವಿಶ್ ಗೋವಿಂದಸಾಮಿ ಸರಕಾರವನ್ನು ಆಗ್ರಹಿಸಿದ್ದಾರೆ. ಸಾಲ ಮರುಪಾವತಿಯನ್ನು ಮರುಹೊಂದಿಸಬೇಕು ಮತ್ತು ಜನ ಎದುರಿಸುತ್ತಿರುವ ಕಷ್ಟಗಳ ಉಪಶಮನಕ್ಕೆ ಸರಕಾರ ಮುಂದಾಗಬೇಕು ಎಂದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಜೆಡಿ ಭಂಡಾರನಾಯಕೆ ಸಲಹೆ ನೀಡಿದ್ದಾರೆ.

    ಆದರೆ ಇದುವರೆಗೂ ಈ ಸಲಹೆ, ಆಗ್ರಹ ಸರಕಾರದ ಕಿವಿಗೆ ಬಿದ್ದಿಲ್ಲ. ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಅಲ್ಪಾವಧಿಯ ಪರಿಹಾರಕ್ಕೆ ಮಾತ್ರ ಗಮನ ಹರಿಸಿದ್ದಾರೆ. ಮತ್ತೆ ಸಾಲ ವಿನಿಮಯದ ಬಗ್ಗೆ ಗಮನ ಹರಿಸಿದ್ದಾರೆ. ಆದರೆ ಸಾಲ ವಿನಿಮಯದಿಂದ ಸಾಲದ ಹೊರೆ ತಗ್ಗುವುದಾದರೂ, ವಿದೇಶಿ ವಿನಿಮಯ ಸಂಗ್ರಹವಾಗುವುದಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಕಳೆದ ವಾರ ಸೆಂಟ್ರಲ್ ಬ್ಯಾಂಕ್ ತನ್ನ 50% ಚಿನ್ನದ ದಾಸ್ತಾನನ್ನು ನಗದಾಗಿ ಪರಿವರ್ತಿಸಿ, 500 ಮಿಲಿಯನ್ ಡಾಲರ್ ಅಂತರಾಷ್ಟ್ರೀಯ ಸೊವರಿನ್ ಬಾಂಡ್ ಪಾವತಿ ಮಾಡಿತ್ತು. ಪ್ರತೀ ವಾರ ಸೆಂಟ್ರಲ್ ಬ್ಯಾಂಕ್‌ನಲ್ಲಿ ಜಮೆಯಾಗುವ ವಿದೇಶಿ ವಿನಿಮಯದಲ್ಲಿ 25% ಪ್ರಮಾಣವನ್ನು ಮಾರಾಟ ಮಾಡಲು ಸರಕಾರ ವಾಣಿಜ್ಯ ಬ್ಯಾಂಕ್‌ಗಳಿಗೆ ಆದೇಶ ನೀಡಿತ್ತು.

 ವಾಣಿಜ್ಯ ಬ್ಯಾಂಕ್‌ಗಳು ತಮ್ಮ ವಿದೇಶಿ ಕರೆನ್ಸಿ ಒಳಹರಿವನ್ನು ಊಹಿಸಲು ಸಾಧ್ಯವಾಗದ ಕಾರಣ, ಆಮದುದಾರರಿಗೆ ಸಾಲದ ಖಾತರಿ ಪತ್ರವನ್ನು ನೀಡಲು ತಯಾರಿಲ್ಲ. ಇದರಿಂದಾಗಿ ಮುಂದೂಡಲ್ಪಟ್ಟ ಪಾವತಿಗಳ ಮೇಲೆ ವಸ್ತುಗಳನ್ನು ಖರೀದಿಸುವ ಪರ್ಯಾಯ ವ್ಯವಸ್ಥೆಯನ್ನು ನೆಚ್ಚಿಕೊಂಡಿರುವ ಆಮದುದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News