ಕೋವಿಡ್ ಔಷಧವನ್ನು ಅಭಿವೃದ್ದಿಪಡಿಸುತ್ತಿರುವ ಕಂಪೆನಿಯಲ್ಲಿ ದೊಡ್ಡ ಷೇರು ಹೊಂದಿರುವ ಜೊಕೊವಿಕ್!

Update: 2022-01-20 08:40 GMT
ಟೆನಿಸ್ ತಾರೆ ನೊವಾಕ್ ಜೊಕೊವಿಕ್ (Photo: AP/PTI)

ಲಂಡನ್: ಕೊರೊನವೈರಸ್ ವಿರುದ್ಧ ಲಸಿಕೆ ಪಡೆಯದೇ ಇರುವುದಕ್ಕೆ ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಗಡೀಪಾರು ಮಾಡಲ್ಪಟ್ಟ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ಕೋವಿಡ್ ಔಷಧವನ್ನು ಅಭಿವೃದ್ಧಿಪಡಿಸುತ್ತಿರುವ ಬಯೋಟೆಕ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ  ಬಹುಪಾಲು ಷೇರುದಾರರಾಗಿದ್ದಾರೆ ಎಂದು ಡ್ಯಾನಿಶ್ ಕಂಪನಿಯ ಸಿಇಒ ಬುಧವಾರ ತಿಳಿಸಿದ್ದಾರೆ.

"ನಾವು ಜೂನ್ 2020 ರಲ್ಲಿ ಸ್ಥಾಪಿಸಿದ ನನ್ನ ಕಂಪನಿಯ ಸಂಸ್ಥಾಪಕರಲ್ಲಿ ಅವರು ಒಬ್ಬರು" ಎಂದು ಕ್ವಾಂಟ್ಬಯೋರೆಸ್ ನ ಮುಖ್ಯ ಕಾರ್ಯನಿರ್ವಾಹಕ ಇವಾನ್ ಲೋನ್ಕರೆವಿಕ್ AFP ಗೆ ತಿಳಿಸಿದರು. 

ಡ್ಯಾನಿಶ್ ಬ್ಯುಸಿನೆಸ್ ರಿಜಿಸ್ಟರ್ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, 34 ವರ್ಷದ ಜೊಕೊವಿಕ್ ಹಾಗೂ ಅವರ ಪತ್ನಿ ಜೆಲೆನಾ ಒಟ್ಟಿಗೆ ಕ್ವಾಂಟ್ಬಯೋರೆಸ್ ನಲ್ಲಿ 80 ಪ್ರತಿಶತದಷ್ಟು ಪಾಲನ್ನು ಹೊಂದಿದ್ದಾರೆ. ಇದು ಡೆನ್ಮಾರ್ಕ್, ಸ್ಲೊವೇನಿಯಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ನಲ್ಲಿ ಸುಮಾರು 20 ಉದ್ಯೋಗಿಗಳನ್ನು ಹೊಂದಿದೆ.

"ನಾವು ವೈರಸ್ ಗಳು ಮತ್ತು ನಿರೋಧಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇವೆ " ಎಂದು ಲೋನ್ಕರೆವಿಕ್ ಹೇಳಿದರು.

"ನಾವು ಕೋವಿಡ್ ನೊಂದಿಗೆ ಯಶಸ್ವಿಯಾದರೆ, ನಾವು ಇತರ ವೈರಸ್ ಗಳೊಂದಿಗೆ ಯಶಸ್ವಿಯಾಗುತ್ತೇವೆ. ಕ್ವಾಂಟ್ಬಯೋರೆಸ್ ಬೇಸಿಗೆಯಲ್ಲಿ ಬ್ರಿಟನ್  ನಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಯೋಜಿಸುತ್ತಿದೆ ಎಂದು CEO ಹೇಳಿದರು.

ಈ ತನಕ ಲಸಿಕೆ ಹಾಕಿಸಿಕೊಳ್ಳದ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಜೊಕೊವಿಕ್ ದಾಖಲೆಯ 21 ನೇ ಪ್ರಮುಖ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡು ವರ್ಷದ ಆರಂಭಿಕ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಉಳಿಯಲು ಕೊನೆಯ ಹಂತದ ನ್ಯಾಯಾಂಗ ಹೋರಾಟದಲ್ಲಿ ವಿಫಲವಾದ ನಂತರ ರವಿವಾರ ಮೆಲ್ಬೋರ್ನ್ನಿಂದ ನಿರ್ಗಮಿಸಿದ್ದರು.

ಡ್ಯಾನಿಶ್ ಬಯೋಟೆಕ್ ಸಂಸ್ಥೆಯಲ್ಲಿ ಜೊಕೊವಿಕ್  ಪಾಲನ್ನು ಹೊಂದಿರುವ ಕುರಿತು AFPಗೆ ಪ್ರತಿಕ್ರಿಯಿಸಲು ಜೊಕೊವಿಕ್ ಅವರ ವಕ್ತಾರರು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News