ಗಾಂಜಾ ಮಾರಾಟ ದಂಧೆಯಲ್ಲಿ ಸಿಎಂ ಭದ್ರತಾ ಸಿಬ್ಬಂದಿ ಭಾಗಿ ಪ್ರಕರಣ: ಸಿಸಿಬಿಯಿಂದ ತನಿಖೆ

Update: 2022-01-20 16:09 GMT

ಬೆಂಗಳೂರು, ಜ.20: ಮುಖ್ಯಮಂತ್ರಿ ನಿವಾಸದ ಸಮೀಪ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಯತ್ನ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಮುಂದಿನ ತನಿಖೆಗಾಗಿ ಸಿಸಿಬಿಗೆ ವಹಿಸಿದ್ದಾರೆ.

ಇತ್ತೀಚಿಗೆ ಮುಖ್ಯಮಂತ್ರಿ ಮನೆ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೋರಮಂಗಲ ಪೊಲೀಸ್ ಠಾಣೆ ಪೇದೆಗಳಾದ ಸಂತೋಷ್ ಮತ್ತು ಶಿವಕುಮಾರ್ ಕರ್ತವ್ಯ ದುರುಪಯೋಗಪಡಿಸಿಕೊಂಡು 80 ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು. 

ಈ ಸಂದರ್ಭದಲ್ಲಿ ಆರ್‍ಟಿ ನಗರ ಠಾಣೆ ಪೊಲೀಸರು ಇವರಿಬ್ಬರು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದರು. ಇದಾದ ಬಳಿಕ, ಬಂಧಿತ ಪೇದೆಗಳ ಪೂರ್ವಾಪರ ಪರಿಶೀಲಿಸದೆ ಸಿಎಂ ನಿವಾಸದ ಭದ್ರತೆಗೆ ನಿಯೋಜನೆ ಮಾಡಿದ್ದ ಕಾರಣಕ್ಕಾಗಿ ಆಗ್ನೇಯ ವಿಭಾಗದ ಡಿಸಿಪಿ ಮಹದೇವ ಶ್ರೀನಾಥ್ ಜೋಷಿ ಮತ್ತು ವಿವಿಐಪಿ ವಿಭಾಗದ ಡಿಸಿಪಿ ಮಂಜುನಾಥ್ ಬಾಬು ಹಾಗೂ ಜೆಸಿ ನಗರ ಉಪವಿಭಾಗದ ಎಸಿಪಿ ಅವರಿಗೂ ನೋಟಿಸ್ ನೀಡಿರುವ ಆಯುಕ್ತರು, ಪ್ರಕರಣದ ಸಂಪೂರ್ಣ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

ಇದೀಗ ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲು ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News