ನಿರುದ್ಯೋಗಿ ಕಾರ್ಮಿಕರ ಚಿತ್ರ ತನ್ನ ರಾಜ್ಯದ್ದಲ್ಲ ಎಂದು ಸುಳ್ಳು ಹೇಳಿದ ಉ. ಪ್ರ. ಸರಕಾರದ ಫ್ಯಾಕ್ಟ್ ಚೆಕ್ಕಿಂಗ್ ಘಟಕ

Update: 2022-01-20 16:14 GMT

Photo: Twitter/@InfoUPFactCheck

ಹೊಸದಿಲ್ಲಿ: ಜನವರಿ 16ರಂದು ಸುದ್ದಿ ಸಂಸ್ಥೆ ಎಎನ್‍ಐನ ಉತ್ತರ ಪ್ರದೇಶ/ಉತ್ತರಾಖಂಡ ಘಟಕದ ಟ್ವಿಟರ್ ಹ್ಯಾಂಡಲ್ ಒಂದು ಟ್ವೀಟ್ ಪೋಸ್ಟ್ ಮಾಡಿ ಕೋವಿಡ್‍ನಿಂದ ವಲಸಿಗ ಕಾರ್ಮಿಕರು ಎದುರಿಸಿದ ಸಂಕಷ್ಟದ ಕುರಿತು ಬರೆದಿತ್ತು. "ಕರ್ಫ್ಯೂವಿನಿಂದ ಕಂಪೆನಿಗಳು ಮುಚ್ಚಿರುವುದರಿಂದ ನಮಗೆ ಯಾವುದೇ ಕೆಲಸವಿಲ್ಲ. ಮೊದಲ ಲಾಕ್‍ಡೌನ್‍ನಲ್ಲಾದಂತೆ ನಮಗೆ ಸರಕಾರದಿಂದ ಯಾವುದೇ ರೇಷನ್ ದೊರೆಯುತ್ತಿಲ್ಲ. ಬಡ ವ್ಯಕ್ತಿಯ ಕಥೆ ಮುಗಿದಿದೆ, ಬಡತನ ಮುಗಿದಿಲ್ಲ,'' ಎಂದು ಒಬ್ಬ ಕಾರ್ಮಿಕ ಹೇಳಿದ್ದಾರೆ ಎಂದು ಬರೆದಿತ್ತು.

ನಂತರ ಸ್ಪಷ್ಟೀಕರಣ ನೀಡಿದ ಎಎನ್‍ಐ ಯಾವುದೇ ಕರ್ಫ್ಯೂ ಹೇರಲಾಗಿಲ್ಲ, ಕಾರ್ಮಿಕ ಹೇಳಿದ್ದನ್ನು ಹಾಗೆಯೇ ಬರೆಯಲಾಗಿದೆ ಎಂದು ತಿಳಿಸಿತ್ತು.

ಉತ್ತರ ಪ್ರದೇಶ ಸರಕಾರದ ಫ್ಯಾಕ್ಟ್ ಚೆಕ್ ಘಟಕವು ಎಎನ್‍ಐನ ಆರಂಭಿಕ ಟ್ವೀಟ್‍ನ ಸ್ಕ್ರೀನ್‍ಶಾಟ್ ಪೋಸ್ಟ್ ಮಾಡಿ, ಚಿತ್ರದಲ್ಲಿರುವ ಕಾರ್ಮಿಕರು ರಾಜ್ಯದವರಲ್ಲ ಎಂದಿತ್ತು.

ಎಎನ್‍ಐ ಕೂಡ ತನ್ನ ಟ್ವೀಟ್‍ಗೆ ಸಂಬಂಧಿಸಿದ ವರದಿಯನ್ನು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿತ್ತು. "ಎಲ್ಲರಿಗೂ ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಿಲ್ಲ, ನೊಯ್ದಾದಲ್ಲಿ ಕೋವಿಡ್ ನಿರ್ಬಂಧಗಳ ನಡುವೆ ಕೆಲಸಕ್ಕಾಗಿ ಕಾಯುತ್ತಿರುವ ಕಾರ್ಮಿಕರು ಹೇಳುತ್ತಾರೆ,'' ಎಂಬ ಶೀರ್ಷಿಕೆ ಈ ಲೇಖನಕ್ಕಿತ್ತು.

ನೊಯ್ಡಾದ ಖೋಡಾ ಲೇಬರ್ ಚೌಕ್ ಪ್ರದೇಶದಿಂದ ಈ ವರದಿ ಮಾಡಲಾಗಿತ್ತು. ಇಕನಾಮಿಕ್ ಟೈಮ್ಸ್, ಲೋಕಮತ್ ಟೈಮ್ಸ್  ಸಹಿತ ಹಲವು ಸುದ್ದಿ ಸಂಸ್ಥೆಗಳು ಎಎನ್‍ಐ ವರದಿ ಆಧಾರದಲ್ಲಿ ಸುದ್ದಿ ಪ್ರಕಟಿಸಿದ್ದವು.

'ಆಲ್ಟ್ ನ್ಯೂಸ್' ಕೀವರ್ಡ್ ಶೋಧ ಮಾಡಿದಾಗ ಮೋಜೋ ಸ್ಟೋರಿ ಮಾಡಿದ ವೀಡಿಯೋ ವರದಿ ಯುಟ್ಯೂಬ್‍ನಲ್ಲಿ ಕಂಡುಬಂದಿತ್ತು. ಈ ವೀಡಿಯೋದಲ್ಲಿನ ಚಿತ್ರಣಗಳು ಎಎನ್‍ಐ ಟ್ವೀಟ್‍ನಲ್ಲಿನ ಚಿತ್ರಗಳಿಗೆ ಸಾಮ್ಯತೆಯಿತ್ತು. ಲೇಬರ್ ಚೌಕ್ ಜಂಕ್ಷನ್‍ನಲ್ಲಿ ಕೆಲಸಕ್ಕಾಗಿ ಕಾದಿರುವ ಕಾರ್ಮಿಕರ ಬಗ್ಗೆ ಅದರಲ್ಲಿ ಬರೆಯಲಾಗಿತ್ತು.

ವೀಡಿಯೋದಲ್ಲಿನ ಚಿತ್ರದಲ್ಲೂ, ಎಎನ್‍ಐ ಟ್ವೀಟ್ ಮಾಡಿದ ಚಿತ್ರದಲ್ಲೂ ನೊಯ್ಡಾ ಡಿಫೆನ್ಸ್ ಅಕಾಡೆಮಿ ಎಂಬ ನಾಮಫಲಕ ಕಾಣಿಸುತ್ತದೆ. ಆದುದರಿಂದ ಎಎನ್‍ಐ ಪ್ರಕಟಿಸಿದ ಚಿತ್ರ ನೊಯ್ಡಾ ಪ್ರದೇಶದ್ದೇ ಹಾಗೂ ಉತ್ತರ ಪ್ರದೇಶ ಸರಕಾರದ ಫ್ಯಾಕ್ಟ್ ಚೆಕ್ಕಿಂಗ್ ವೆಬ್‍ಸೈಟ್ ಉದ್ದೇಶಪೂರ್ವಕವಾಗಿ ಚಿತ್ರ ನೊಯ್ಡಾದ್ದಲ್ಲ ಎಂದು ಹೇಳಿರುವುದು ಸ್ಪಷ್ಟ ಎಂದು altnews.in ವರದಿ ಮಾಡಿದೆ.

ಕೃಪೆ: altnews.in 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News