ಕೇರಳದಲ್ಲಿ ರವಿವಾರದಂದು ಲಾಕ್ಡೌನ್ ಜಾರಿ

Update: 2022-01-23 17:32 GMT

ತಿರುವನಂತಪುರ, ಜ.23: ಏರುಗತಿಯನ್ನು ಕಾಣುತ್ತಿರುವ ಕೋವಿಡ್19 ಮೂರನೆ ಅಲೆಯ ಹರಡುವಿಕೆಗೆ ಕಡಿವಾಣ ಹಾಕುವ ಕ್ರಮವಾಗಿ ಕೇರಳದಲ್ಲಿ ರವಿವಾರ ಒಂದು ದಿನದ ಲಾಕ್ಡೌನ್ ಹೇರಲಾಗಿದ್ದು, ಕೇವಲ ಅಗತ್ಯ ಸೇವೆಗಳಿಗೆ ಮಾತ್ರವೇ ಅನುಮತಿ ನೀಡಲಾಗಿತ್ತು.

ಹಾಲು, ದಿನಪತ್ರಿಕೆ,ಮೀನು,ಮಾಂಸ,ಹಣ್ಣಹಂಪಲು ಹಾಗೂ ತರಕಾರಿಯಂತಹ ಅಗತ್ಯ ಸಾಮಾಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಗ್ಗೆ ಏಳರಿಂದ ರಾತ್ರಿ 9:00 ಗಂಟೆಯ ವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಬಹುತೇಕ ಖಾಸಗಿ ವಾಹನಗಳು ರವಿವಾರ ರಸ್ತೆಗೆ ಇಳಿದಿರಲಿಲ್ಲ . ವಿಮಾನನಿಲ್ದಾಣಗಳು ಹಾಗೂ ತುರ್ತು ಉದ್ದೇಶಗಳಿಗಾಗಿ ಪ್ರಯಾಣಿಸುವವರು ಅಗತ್ಯ ದಾಖಲೆಗಳನ್ನು ತೋರಿಸಿದ ಬಳಿಕವೇ ಅವರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.

ಹೊಟೇಲ್ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಮಾತ್ರವೇ ಅನುಮತಿ ನೀಡಲಾಗಿತ್ತು. ಔಷಧಿ ಅಂಗಡಿಗಳು, ಮಾಧ್ಯಮಸಂಸ್ಥೆಗಳು ಹಾಗೂ ಟೆಲಿಕಾಂ ಇಂಟರ್ನೆಟ್ ಸೇವಾಸಂಸ್ಥೆಗಳಿಗೆ ಎಂದಿನಂತೆ ಕಾರ್ಯಾಚರಿಸಲು ಅನುಮತಿ ನೀಡಲಾಗಿತ್ತು,.
ಗುರುವಾರ ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಾಮರ್ಶನಾ ಸಭೆಯಲ್ಲಿ ಜನವರಿ 23 ಹಾಗೂ 30 ಹೀಗೆ ಈ ಎರಡು ರವಿವಾರಗಳಂದು ಕೇರಳದಲ್ಲಿ ಲಾಕ್ಡೌನ್ ಘೋಷಿಸಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News