ಯುವ ಸಮೂಹಕ್ಕೆ ಡ್ರೈವಿಂಗ್ ಲೈಸನ್ಸ್ ಪಡೆಯಲಿರುವ ಆಸಕ್ತಿ ಎಪಿಕ್ ಕಾರ್ಡ್ ಪಡೆಯುವುದರಲ್ಲಿಲ್ಲ: ದ.ಕ.ಜಿಲ್ಲಾಧಿಕಾರಿ
ಮಂಗಳೂರು, ಜ. 25: ಭ್ರಷ್ಟಾಚಾರದ ಬಗ್ಗೆ ಎಲ್ಲೆಡೆಯೂ ಮಾತುಗಳು ಕೇಳಿ ಬರುತ್ತವೆ. ಹಾಗಾಗಿ ಚುನಾವಣೆಯ ಸಂದರ್ಭ ಆಮಿಷಕ್ಕೊಳಗಾಗದೆ ಮತ ಚಲಾವಣೆ ಮಾಡಿದ್ದಲ್ಲಿ ಭ್ರಷ್ಟಾಚಾರವನ್ನು ಹೊಡೆದೋಡಿಸಬಹುದು. ಜಿಲ್ಲೆಯಲ್ಲಿ 18 ವರ್ಷ ಪ್ರಾಯ ಪೂರೈಸಿದ ಅಂದಾಜು 30 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿದ್ದಾರೆ. ಅವರಿಗೆ ಚಾಲನಾ ಪರವಾನಿಗೆ ಪಡೆಯು ದರಲ್ಲಿರುವ ಆಸಕ್ತಿ ಎಪಿಕ್ ಕಾರ್ಡ್ ಪಡೆಯುವುದರಲ್ಲಿ ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾ ಚುನಾವಣಾ ಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೀಗ ವೋಟರ್ ಹೆಲ್ಪ್ಲೈನ್‌ಗಳ ಮೂಲಕವೂ ಮತದಾರರ ಗುರುತಿನ ಚೀಟಿಯಲ್ಲಿರುವ ದೋಷಗಳನ್ನು ತಿದ್ದಿಕೊಳ್ಳಬಹುದಾಗಿದೆ, ಅದೇ ರೀತಿ ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಗರುಡಾ ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ. ವಿದೇಶಗಳಲ್ಲಿರುವ ಜಿಲ್ಲೆಯ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಬದಲಾವಣೆಗಳಿದ್ದರೆ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಡಿಸಿ ಹೇಳಿದರು.
ಮತದಾರರ ಸಾಕ್ಷರತಾ ಕ್ಲಬ್ಗಳು ಎಲ್ಲಾ ಕಾಲೇಜುಗಳಲ್ಲೂ ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು. 18 ವರ್ಷ ಮೇಲ್ಪಟ್ಟ ವರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬೇಕು ಎಂದು ಡಿಸಿ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ವರ್ಣೇಕರ್ ಮಾತನಾಡಿ 2011ರಲ್ಲಿ ದೇಶದಾದ್ಯಂತ ಮತದಾರರ ದಿನಾಚರಣೆ ಆರಂಭವಾಯಿತು. ಆ ಮೂಲಕ ಮತದಾರರನ್ನು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ. ಶೇ.40ರಷ್ಟು ಮತದಾನವಾದಲ್ಲಿ ಸೂಕ್ತ ಅಭ್ಯರ್ಥಿಯ ಆಯ್ಕೆ ನಡೆಯುವುದಿಲ್ಲ. ಜನರ ಬೇಡಿಕೆಗಳನ್ನು ಈಡೇರಿಸುವ ಮತ್ತು ಉತ್ತಮ ಸಮಾಜ ನಿರ್ಮಿಸುವ ರಾಜಕಾರಣಿಯ ಉಗಮಕ್ಕೆ ದೇಶದ ಎಲ್ಲ ಪ್ರಜೆಗಳೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಿದೆ. ಆ ಮೂಲಕ ಜನರು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಡಾ. ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಧರ್ಮಗಿರಿ ರಾಮಸ್ವಾಮಿ ಸುಬ್ಬಣ್ಣ, ಅಪರ ಜಿಲ್ಲಾಧಿಕಾರಿ ಮಾಣಿಕ್ಯ ಎನ್, ಮತದಾರರ ನೋಂದಣಾಧಿಕಾರಿ ಹಾಗೂ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ-ಕಾಲೇಜು ವಿದ್ಯಾಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.