ಸೋನಿ ಚಾನಲ್ ನ ಶಾರ್ಕ್ ಟ್ಯಾಂಕ್ ನಲ್ಲಿ ಮಂಗಳೂರಿನ ಝಮ್ ಜ್ಹೀರ್, ರೂಹಿ ದಂಪತಿಯ ಕುನಾಫ ವರ್ಲ್ಡ್!

Update: 2022-01-26 07:15 GMT

ಮಂಗಳೂರು: ಮಂಗಳೂರಿನ ಒಂದು ದಂಪತಿ ಮತ್ತು ಅವರ ನವೋದ್ಯಮ (ಸ್ಟಾರ್ಟ್ ಅಪ್) ಇಂದು ರಾತ್ರಿ 9 ಗಂಟೆಗೆ ಸೋನಿ ಚಾನಲ್ ಮತ್ತು ಸೋನಿ LIV app ನ ಶಾರ್ಕ್ ಟ್ಯಾಂಕ್ ಶೋ ದಲ್ಲಿ ಪ್ರಸ್ತುತಗೊಳ್ಳಲಿದೆ. ಈ ಶಾರ್ಕ್ ಟ್ಯಾಂಕ್ ವೇದಿಕೆಯು ಭಾರತದ ಉದಯೋನ್ಮುಖ ಯುವ ಉದ್ಯಮಿಗಳಿಗೆ ತಮ್ಮ ಉದ್ಯಮ ಪರಿಕಲ್ಪನೆಗಳನ್ನು ಪ್ರಸ್ತುತ ಪಡಿಸಿ ತಮ್ಮ ಉದ್ಯಮದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಉತ್ತೇಜಿಸುತ್ತದೆ.

ಮಂಗಳೂರಿನ ದಂಪತಿ ಝಮ್ ಜ್ಹೀರ್ ಮತ್ತು ಜಮೀಲಾ ರೂಹಿ ತಮ್ಮ ಸ್ಟಾರ್ಟ್-ಅಪ್ "ಕುನಾಫ ವರ್ಲ್ಡ್'' ಅನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ದಂಪತಿಯ ಈ ನವೋದ್ಯಮವು 2018ರಲ್ಲಿ ಕೇವಲ ಒಂದು ಫೇಸ್ಬುಕ್ ಪುಟದ ಮೂಲಕ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತ್ತು. ಇಂದು ಕುನಾಫ ವರ್ಲ್ಡ್ ಒಂದು ರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಆಗಿದ್ದು ಬೆಂಗಳೂರು ಕೇರಳ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಳಿಗೆಗಳನ್ನು ಹೊಂದಿದೆ.

ಮೂಲತಃ ಗೃಹಿಣಿಯಾಗಿರುವ ರೂಹಿ ಅವರಿಗೆ ಡೆಸ್ಸರ್ಟ್ಸ್ (ಸಿಹಿ ತಿಂಡಿಗಳನ್ನು) ತಯಾರಿಸುವುದೆಂದರೆ ಅಚ್ಚುಮೆಚ್ಚು. ಅವರ ಪರಿಕಲ್ಪನೆಯಿಂದ ಹುಟ್ಟಿಕೊಂಡ ಕುನಾಫ ವರ್ಲ್ಡ್ ನಲ್ಲಿ ಮಧ್ಯ-ಪ್ರಾಚ್ಯದ ಸಿಹಿತಿನಿಸುಗಳನ್ನು ಭಾರತಕ್ಕೆ ಪರಿಚಯಿಸಲಾಗಿದೆ. ಒಮ್ಮೆ ರೂಹಿ ಇಂತಹ ತಿಂಡಿಗಳನ್ನು ಸಿದ್ಧಪಡಿಸಿ ಝಮ್ ಜ್ಹೀರ್ ಅವರಿಗೆ ತಯಾರಿಸಿ ನೀಡಿದಾಗ ಅದರ ರುಚಿಯಿಂದ ಬಾಯಿಚಪ್ಪರಿಸಿದ ಝಮ್ ಜ್ಹೀರ್ ಪತ್ನಿಗೆ ಪ್ರೋತ್ಸಾಹ ನೀಡಿದ್ದರು.

ಹೀಗೆ ತಮ್ಮ ಫೇಸ್ಬುಕ್ ಪುಟ ‘ಬೇಕ್ ಏಂಜೆಲ್' ಮೂಲಕ ರೂಹಿ ತಮ್ಮ ಉದ್ಯಮ ಆರಂಭಿಸಿದ್ದರೆ ಅವರ ಪತಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡಿದ್ದಾರೆ. ಒಂದು ವರ್ಷದ ನಂತರ ಝಮ್ ಜ್ಹೀರ್ ಅವರ ಸ್ನೇಹಿತ ಮುಹಮ್ಮದ್ ಹಫೀಝ್ ಅವರ ಪಾಲುದಾರಿಕೆಯಲ್ಲಿ ಮಂಗಳೂರಿನಲ್ಲಿ ಮೊದಲ ಮಳಿಗೆ ತೆರೆಯಲಾಯಿತು. ಈಗ ಅವರ ಕುನಾಫ ವರ್ಲ್ಡ್ ಮನೆಮಾತಾಗಿದೆ. ರೂಹಿ ಅವರು ಉತ್ಪನ್ನಗಳ ಪೂರೈಕೆ ಮತ್ತು ಸಂಸ್ಥೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡರೆ ಝಮ್ ಜ್ಹೀರ್ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

``ದೇಶಾದ್ಯಂತದ 69,000ಕ್ಕೂ ಅಧಿಕ ಅರ್ಜಿದಾರರ ಪೈಕಿ ಸೋನಿ ಟಿವಿಯ ಶಾರ್ಕ್ ಟ್ಯಾಂಕ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದೇ ನಮಗೆ ಮತ್ತು ನಮ್ಮ ಕುನಾಫ ವರ್ಲ್ಡ್ ಪಾಲಿಗೆ ದೊಡ್ಡ ಸಾಧನೆ. ಮಂಗಳೂರಿನಿಂದ ಆರಂಭಗೊಂಡು ಈಗ ದೇಶಾದ್ಯಂತ ನಮ್ಮ ಉದ್ಯಮ ಯಶಸ್ಸು ಸಾಧಿಸಿದೆ. ನಮ್ಮ ಈ ಪಯಣದಲ್ಲಿ ನಮಗೆ ಬೆಂಬಲ ನೀಡಿದ ನಮ್ಮ ಕುಟುಂಬ, ಸ್ನೇಹಿತರು, ಹಿತೈಷಿಗಳಿಗೆ ನಾವು ಆಭಾರಿ,'' ಎಂದು ದಂಪತಿ ವಾರ್ತಾ ಭಾರತಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News