ಕಡಬ : ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಂಭೀರ ಗಾಯ

Update: 2022-01-26 09:22 GMT

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ‌ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ‌ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇಲ್ಲಿನ ಅರಣ್ಯ ಪ್ರದೇಶದಲ್ಲಿ ನೆಡುತೋಪಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ತನೆ ಕಾಡಾನೆಯೊಂದು ದಾಳಿ ನಡೆಸಿದ್ದು ಅವರ  ತಲೆ ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೇವಪ್ಪ ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆಯಲ್ಲಿ ನೆಡುತೋಪುಗಳಲ್ಲಿ ಗಿಡ ನೆಡುವ ಕೆಲಸ ಮಾಡುತ್ತಿದ್ದರು.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಆಗಮಿಸಿದ್ದು, ತಕ್ಷಣ ಗಾಯಗೊಂಡ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಭಾಗದಲ್ಲಿ ಇತ್ತೀಚಿಗೆ ಕೃಷಿ ಜಾಗಕ್ಕೆ ಕಾಡಾನೆ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆಗೆ ಇದರ ಬಗ್ಗೆ  ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸದ್ಯ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದು ಈ ಭಾಗದ ಜನ ಭಯಭೀತರಾಗಿ ಬದುಕುವ ಪರಿಸ್ಥಿತಿ ಎದುರಾಗಿದೆ. ತಕ್ಷಣ ಅರಣ್ಯ ಸಿಬ್ಬಂದಿ ಎಚ್ಚೆತ್ತುಕೊಂಡು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News