ಸಚಿವ ಸುನಿಲ್‌ ಕುಮಾರ್‌ ಹೇಳಿಕೆಯಲ್ಲಿ ಆಶ್ಚರ್ಯವೇನಿಲ್ಲ - ಬಿಪಿನ್ ಚಂದ್ರ ಪಾಲ್‌ ನಕ್ರೆ

Update: 2022-01-26 12:51 GMT

ಕಾರ್ಕಳ : ಗಣರಾಜ್ಯೋತ್ಸವ ಪರೇಡ್ ಹೆಸರಲ್ಲಿ ದಾರ್ಶನಿಕ ಪುರುಷ ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಆದ ಅವಮಾನ ಮತ್ತು ಅದರ ವಿರುದ್ಧ ನಡೆಯುವ ಜನಾಂದೋಲನವು ಮನುವಾದಿ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಸಚಿವ ಸುನೀಲ್ ಕುಮಾರ್ ಅವರಿಗೆ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ಸಮಾಜ ಒಡೆಯುವ ಷಡ್ಯಂತ್ರವಾಗಿ ಕಂಡು ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಿಂದುತ್ವದ ಹೆಸರಲ್ಲಿ ಸಮಾಜವನ್ನು ಒಡೆದೇ ಅಧಿಕಾರ ಗಿಟ್ಟಸಿಕೊಂಡವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡುವ ಬಿಜೆಪಿಯ ಪ್ರಸ್ತಾವನೆಯ ಹಿಂದೆ ಕ್ರೈಸ್ತ ಸಮಾಜವನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟುವ  ಪೂರ್ವಾಗ್ರಹದ ಪಿತೂರಿಯಿತ್ತು. ಈಗಾಗಲೇ ಲೇಡಿಹಿಲ್ ಸರ್ಕಲ್ ಎಂದು ಮಂಗಳೂರಿನ ಜನಮಾನಸದಲ್ಲಿ ನೆಲೆಯಾಗಿರುವ ಈ ಹೆಸರನ್ನು ಅಳಿಸಿ ನಾರಾಯಣಗುರು ವೃತ್ತ ಎಂದು ಹೆಸರಿಸುವ ಬದಲು ಬ್ರಹ್ಮಶ್ರೀ ನಾರಾಯಣ ಗುರುಗಳು ಮೊಟ್ಟಮೊದಲ ಬಾರಿಗೆ ಮಂಗಳೂರಿಗೆ ಪಾದಸ್ಪರ್ಶ ಮಾಡಿದ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಈ ಹೆಸರಿಡುವಂತೆ ಕಾಂಗ್ರೆಸ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವ ಸುನೀಲ್ ಕುಮಾರ್ ಅವರಿಗೆ ಸತ್ಯದ ಭಯ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

'ಸುನಿಲ್‌ ಕುಮಾರ್‌ ಸುಸಂಸ್ಕೃತ ಹೇಳಿಕೆ ನೀಡಲಿ'

ಇತಿಹಾಸ ಅರಿಯದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಜಯಂತಿ ಆಚರಣೆಯೊಂದಿಗೆ ನಾರಾಯಣಗುರುಗಳ ಜಯಂತಿ ಆಚರಣೆಯನ್ನೂ ತನ್ನ ಅವಧಿಯಲ್ಲಿ ಜಾರಿಗೆ ತಂದಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ. ಆ ಮೂಲಕ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಿದ್ಧಾಂತಕ್ಕೆ ಒತ್ತು ನೀಡಿರುವುದು ಜಾತಿ ಮತ ದೇವರ ಹೆಸರಲ್ಲಿ ಸಾಮಾಜಿಕ ನೆಮ್ಮದಿ ಕೆಡಿಸುತ್ತಿರುವ ಬಿಜೆಪಿ ಯವರಿಗೆ ಸಹಜವಾಗಿಯೇ ಸಹಿಸಲಾಗತ್ತಿಲ್ಲ. ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ  ಅನಗತ್ಯ ಹೇಳಿಕೆ ನೀಡುವ ಬದಲು ಸುಸಂಸ್ಕೃತಿಯ ಹೇಳಿಕೆ ನೀಡಲಿ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News