×
Ad

ಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ

Update: 2022-01-28 22:34 IST

ಮಂಗಳೂರು, ಜ.28: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ಅಂಬೇಡ್ಕರ್ ವಿರೋಧಿ ಧೋರಣೆಯನ್ನು ಖಂಡಿಸಿ ಮತ್ತು ತಕ್ಷಣದಿಂದಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ 2014ರ ಬಳಿಕ ದೇಶವು ಭಾವನಾತ್ಮಕ ಲೋಕದಲ್ಲಿ ತೇಲಾಡುತ್ತಿದೆ. ಅದಕ್ಕೆ ಪೂರಕ ಎಂಬಂತೆ ನ್ಯಾಯಾಧೀಶರೊಬ್ಬರು ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮಾತ್ರವಲ್ಲ ದೇಶದ ಸಂವಿಧಾನವನ್ನೇ ಅವಮಾನಿಸಿದ್ದಾರೆ. ಹಾಗಾಗಿ ಆ ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಕಲ್ಪಿಸಿದ ಮೀಸಲಾತಿಯಿಂದ ದಲಿತರು ಮಾತ್ರ ಪ್ರಯೋಜನ ಪಡೆದದ್ದಲ್ಲ. ಇಲ್ಲಿನ ಬಿಲ್ಲವರು, ಬಂಟರು, ಮುಸ್ಲಿಮರು, ಕ್ರೈಸ್ತರು ಕೂಡ ಪಡೆದಿದ್ದಾರೆ. ಅಷ್ಟೇ ಯಾಕೆ, ದೇಶದ ಜನಸಂಖ್ಯೆಯಲ್ಲಿ ಶೇ.3ರಷ್ಟಿರುವ ಬ್ರಾಹ್ಮಣರು ಕೂಡ ಶೇ.10ರಷ್ಟು ಮೀಸಲಾತಿಯನ್ನು ಪಡೆದಿದ್ದಾರೆ. ಅಂತಹವರೇ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ ಎಂದು ರವಿಕಿರಣ್ ಪುಣಚ ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ಸಿಪಿಐ ಮುಖಂಡ ಸೀತಾರಾಮ ಬೇರಿಂಜ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ವಿವಿಧ ಸಂಘಟನೆಗಳ ಮುಖಂಡರಾದ ರಾಮಣ್ಣ ವಿಟ್ಲ, ರಾಜಾ ಚೆಂಗ್ತಿಮಾರ್, ಸತೀಶ್ ಅರಳ, ಕರುಣಾಕರ ಮಾರಿಪಳ್ಳ, ಕೃಷ್ಣಪ್ಪ ವಾಮಂಜೂರು, ಸಂಕಪ್ಪ ಕಾಂಚನ್, ಮಂಜಪ್ಪ ಪುತ್ರನ್, ಮಲ್ಲಿಕಾರ್ಜುನ ಕೋಡಿಕಲ್, ಚಂದ್ರ ಕುಮಾರ್, ನಾಗೇಶ್ ಚಿಲಿಂಬಿ, ಯು.ಬಿ.ಉಮೇಶ್, ಸುರೇಶ್ ಬೆಳ್ಳಾಯಾರು, ಸರೋಜಿನಿ ಬಂಟ್ವಾಳ, ಕಲಾವತಿ ಕೋಟೆಕಾರ್,ಗೀತಾ ಕರಂಬಾರು, ರಮೇಶ್ ಸೂಟರ್‌ಪೇಟೆ, ಎಚ್‌ಡಿ ಲೋಹಿತ್, ದಿನೇಶ್ ಮಂಗಳೂರು, ಗಿರಿಜಾ ನಾಗೇಶ್, ಶಶಿಕಲಾ, ದೊಂಬಯ್ಯ, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News