ದ.ಕ.ಜಿಲ್ಲೆ; ಅಮೃತ ಯೋಜನೆಯಡಿ 25 ಅಂಗನವಾಡಿಗಳ ಅಭಿವೃದ್ಧಿಗೆ ಅನುದಾನ: ಸಚಿವ ಆಚಾರ್ ಹಾಲಪ್ಪ
ಮಂಗಳೂರು, ಜ.28: ದ.ಕ ಜಿಲ್ಲೆಯ 25 ಅಂಗನವಾಡಿ ಕಟ್ಟಡಗಳಿಗೆ ಅಮೃತ ಯೋಜನೆಯಡಿ ತಲಾ 1 ಲ.ರೂ.ಗಳಂತೆ 25 ಲ.ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ತಿಳಿಸಿದ್ದಾರೆ.
ದ.ಕ.ಜಿಪಂ ಸಭಾಂಗಣದಲ್ಲಿ ಶುಕ್ರವಾರ ಇಲಾಖಾ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ 1,49,400 ಮಕ್ಕಳು ದಾಖಲಾಗಿದ್ದು, ಪೂರಕ ಪೌಷ್ಠಿಕ ಆಹಾರ ಪಡೆಯುತ್ತಿ ದ್ದಾರೆ. 13,380 ಗರ್ಭಿಣಿಯರು, 13,793 ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 25 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 55 ಸಹಾಯಕಿಯರ ಹುದ್ದೆ ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 41 ತೀವ್ರ ಅಪೌಷ್ಠಿಕ ಮಕ್ಕಳು, 2067 ಸಾಧಾರಣ ತೂಕದ ಮಕ್ಕಳನ್ನು ಗುರುತಿಸಲಾಗಿದೆ. ಅವರ ಆರೋಗ್ಯ ಸುಧಾರಣೆಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ 2021-22 ನೇ ಸಾಲಿನಲ್ಲಿ 3,432 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲಾಗುತ್ತಿದೆ. ಜಿಲ್ಲೆಯಲ್ಲಿ 4,058 ಸ್ತ್ರೀ ಶಕ್ತಿ ಗುಂಪುಗಳನ್ನು ರಚನೆ ಮಾಡಲಾಗಿದೆ ಎಂದು ಸಚಿ ಆಚಾರ್ ಹಾಲಪ್ಪ ಹೇಳಿದರು