ಸೋಮೇಶ್ವರ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ, ರಕ್ಷಿಸಲು ಹೋದ ಯುವಕ ಮೃತ್ಯು
ಉಳ್ಳಾಲ: ಯುವಕನೋರ್ವ ಇಬ್ಬರು ಯುವತಿಯರ ಜೊತೆ ಬೆಳೆಸಿದ ಪ್ರೇಮ ವಿಚಾರಕ್ಕೆ ಸಂಬಂಧಿಸಿ ಉಂಟಾದ ಕಲಹದಲ್ಲಿ ಯುವತಿಯೋರ್ವಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ರಕ್ಷಿಸಲು ಹೋದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ರಾಣಿಪುರದ ಲಾಯ್ಡ್ ಡಿಸೋಜ (28) ಮೃತರು ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ರಾಣಿಪುರದ ಲಾಯ್ಡ್ ಡಿಸೋಜ ಪನೀರ್ ನಿವಾಸಿ ಅಶ್ವಿತ ಪೆರಾವೊ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದರ ಜೊತೆಗೆ ಚೆಂಬುಗುಡ್ಡೆ ನಿವಾಸಿ ಯುವತಿಯೋರ್ವಳನ್ನು ಕೂಡಾ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಈ ವಿಚಾರ ತಿಳಿದ ಅಶ್ವಿತ ಪೆರಾವೊ ಲಾಯ್ಡ್ ಜತೆ ಜಗಳವಾಡಿದ್ದಳೆನ್ನಲಾಗಿದೆ. ಸಮಸ್ಯೆ ಸರಿಪಡಿಸಲು ಸೋಮೇಶ್ವರದಲ್ಲಿ ಮಾತುಕತೆ ನಡೆಸುವ ಉದ್ದೇಶ ದಿಂದ ಲಾಯ್ಡ್ ಡಿಸೋಜ ಇಬ್ಬರನ್ನು ಕರಕೊಂಡು ಸೋಮೇಶ್ವರಕ್ಕೆ ಶುಕ್ರವಾರ ಬಂದಿದ್ದು, ಈ ವೇಳೆ ಅಸಮಾಧಾನಗೊಂಡ ಅಶ್ವಿತ ಪೆರಾವೊ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಲಾಯ್ಡ್ ಡಿಸೋಜ ಕೂಡಾ ಸಮುದ್ರಕ್ಕೆ ಹಾರಿದ್ದು, ಯುವತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾಯ್ಡ್ ಡಿಸೋಜ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.