ಕೋವಿಡ್ ಮಾರ್ಗಸೂಚಿ ಮತ್ತಷ್ಟು ಸಡಿಲಿಕೆ?: ಸಿಎಂ ನೇತೃತ್ವದ ಇಂದಿನ ಸಭೆ ನಿರ್ಧಾರ
Update: 2022-01-29 11:03 IST
ಬೆಂಗಳೂರು, ಜ.29: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಜ.29) ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳಲ್ಲಿ ಇನ್ನಷ್ಟು ಸಡಿಲಿಕೆ ಸಾಧ್ಯತೆ ಇದೆ.
ಇಂದು ಮಧ್ಯಾಹ್ನ ಒಂದು ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುವ ಸಭೆಯಲ್ಲಿ ಸದ್ಯ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಮತ್ತು 50:50 ರೂಲ್ಸ್ ಅನ್ನು ಕೈ ಬಿಡುವ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಗೃಹ ಸಚಿವ, ಆರೋಗ್ಯ ಸಚಿವ, ಕಂದಾಯ ಸಚಿವ, ಉನ್ನತ ಶಿಕ್ಷಣ ಸಚಿವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಸರಕಾರದ ಮುಖ್ಯ ಕಾರ್ಯದರ್ಶಿ, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.