ಬೊಮ್ಮಾಯಿ ಅವಧಿಯಲ್ಲಿ ಅಭಿವೃದ್ಧಿಯಾಗಿಲ್ಲ, ಭ್ರಷ್ಟಾಚಾರ ಹೆಚ್ಚಾಗಿದೆ: ಸಿದ್ದರಾಮಯ್ಯ ಆರೋಪ
ಬೆಂಗಳೂರು, ಜ.29: ಬಸವರಾಜ ಬೊಮ್ಮಾಯಿ ಸರಕಾರದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿಯಾಗಿಲ್ಲ. ಬದಲಿಗೆ ಭ್ರಷ್ಟಾಚಾರವೇ ಹೆಚ್ಚಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಆರು ತಿಂಗಳ ಸಾಧನೆ ಕುರಿತು ವಿಶ್ಲೇಷಿಸಿ ಮಾತನಾಡುತ್ತಿದ್ದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಎರಡುವರೆ ವರ್ಷಗಳ ಅವಧಿಯಲ್ಲೂ ಸಾಧನೆಗಳಾಗಿಲ್ಲ . ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಆರು ತಿಂಗಳ ಅವಧಿಯಲ್ಲೂ ಅಭಿವೃದ್ಧಿಯಾಗಿಲ್ಲ, ಬದಲಿಗೆ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಸೌಲಭ್ಯ ಒದಗಿಸುವುದು ಪ್ರತಿಯೊಂದು ಸರಕಾರದ ಕರ್ತವ್ಯವೇ ಹೊರತು ಅದನ್ನು ಅಂತಃಕರಣದ ಸೇವೆ ಎಂದು ಭಾವಿಸಬೇಕಿಲ್ಲ .
ತಮ್ಮದು ಅಂತಃಕರಣದ ಸರಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಬಡವರ ವಿಷಯದಲ್ಲಿ ಕರುಣೆ ಅಥವಾ ಅಂತಃಕರಣ ತೋರಿಸಬೇಕಿಲ್ಲ. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಸರಕಾರದ ಜವಾಬ್ದಾರಿ ಅದನ್ನು ಕರುಣೆ ಎಂಬ ಭಾವನೆಯಿಂದ ಮಾಡಬೇಕಿಲ್ಲ ಎಂದರು.
ಕೋವಿಡ್ ಕಾಲದಲ್ಲಿ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಚಿಕಿತ್ಸೆ, ಔಷಧಿಗಳಿಲ್ಲದೆ ಮೂರ್ನಾಲ್ಕು ಲಕ್ಷ ಜನ ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರ 38 ಸಾವಿರ ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ಹೇಳಿದೆ. ಸರ್ಕಾರ ಹೇಳಿದ ಲೆಕ್ಕದ ಪ್ರಕಾರವೂ ಪರಿಹಾರ ನೀಡಿಲ್ಲ. ಕೇಂದ್ರ 27 ಸಾವಿರ, ರಾಜ್ಯ ಸರ್ಕಾರ 13 ಸಾವಿರ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸರಿಯಾಗಿ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ, ಕೃಷ್ಣ ನ್ಯಾಯಾೀಕರಣದ ತೀರ್ಪು ಪ್ರಕಟವಾಗಿ ಎಷ್ಟು ದಿನವಾಗಿದೆ. ಈವರೆಗೂ ಯಾಕೆ ತೀರ್ಪಿನ ಅಸೂಚನೆ ಜಾರಿಯಾಗಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.