×
Ad

ಬೆಂಗಳೂರು: ವಿಲ್ಲಾ ಮಾದರಿಯ ಮನೆ ನಿರ್ಮಿಸಿ ಕೊಡುವುದಾಗಿ ವಂಚನೆ; ವಿದೇಶಿ ಪ್ರಜೆಯ ಆರೋಪ

Update: 2022-01-29 18:19 IST

ಬೆಂಗಳೂರು, ಜ.29: ವಿಲ್ಲಾ ಮಾದರಿಯ ಮನೆ ನಿರ್ಮಿಸಿ ಕೊಡುವುದಾಗಿ ಹಣವನ್ನು ಪಡೆದಿರುವ ಬೆಂಗಳೂರಿನ *ಬ್ರಿಗೇಡ್ ಎಂಟರ್ ಪ್ರೈಸೆಸ್ ವಿಲ್ಲಾ ನಿರ್ಮಿಸಿಕೊಡದೆ ವಂಚನೆ ಮಾಡಿದೆ ಎಂದು ವಂಚನೆಗೆ ಒಳಗಾದ ಹಾಗೂ ಇಸ್ರೇಲಿ ಸಂಜಾತ ಭಾರತೀಯ ಸಾಗರೋತ್ತರ ಪ್ರಜೆ ಮಾಲ್ಕಾಇರಾನಿ ಆರೋಪಿಸಿದ್ದಾರೆ.

ಶನಿವಾರದಂದು ಪ್ರೆಸ್‍ ಕ್ಲಬ್‍ನಲ್ಲಿ ಮಾತನಾಡಿದ ಅವರು, ನಗರದ ಹೊರಭಾಗದಲ್ಲಿ 2.5 ಕೋಟಿ ರೂ. ಮೌಲ್ಯದ ವಿಲ್ಲಾ ನಿರ್ಮಿಸಿಕೊಡುವುದಾಗಿ ಹೇಳಿದ್ದ ಬ್ರಿಗೇಡ್ ಎಂಟರ್ ಪ್ರೈಸೆಸ್, ಕಳೆದ ಒಂದು ವರ್ಷದ ಹಿಂದೆ ಮುಂಗಡ ಹಣವನ್ನು ಪಡೆದಿತ್ತು. ಆದರೆ ಇದುವರೆಗೂ ವಿಲ್ಲಾವನ್ನು ಹಸ್ತಾಂತರ ಮಾಡಿಲ್ಲ ಎಂದರು.

ವಿಲ್ಲಾ ನಿರ್ಮಾಣವಾಗುವವರೆಗೂ ಕ್ಲಬ್‍ಹೌಸ್‍ನಲ್ಲಿ ವಾಸವಿರುವಂತೆ ಮನೆಯನ್ನು ಒದಗಿಸಲಾಗಿತ್ತು. ಆದರೆ ಈಗ ಕ್ಲಬ್ ಹೌಸ್‍ನಲ್ಲಿ ಬೇರೆ ಕೆಲಸವಿದೆ ಎಂದು ಮನೆಯನ್ನು ಖಾಲಿ ಮಾಡುವಂತೆ ಬ್ರಿಗೇಡ್ ಒತ್ತಡ ಹಾಕುತ್ತಿದೆ. ಹಾಗಾಗಿ ಪ್ರತಿನಿತ್ಯ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅವರು ತಿಳಿಸಿದರು. 

ಪ್ರಾಜೆಕ್ಟ್ ರೇರಾ ಕಾಯ್ದೆಯಡಿ ನೋಂದಣಿಯಾಗಿದ್ದರೂ, ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗುತ್ತಿದೆ. ವಿಲ್ಲಾಗಳನ್ನು ಅಪಾರ್ಟ್‍ಮೆಂಟ್ ರೀತಿಯಲ್ಲಿ ಮಾರಾಟ ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲದಿದ್ದರೂ, ಮಾರಾಟ ಮಾಡಿ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಎಲ್ಲಾ ವಂಚನೆ ಮತ್ತು ಅಕ್ರಮ ಮಾಡುತ್ತಿರುವ ಬ್ರಿಗೇಡ್ ಬಿಲ್ಡರ್ಸ್‍ನ ಚೇರ್ಮನ್ ಎಂ.ಆರ್. ಜೈಶಂಕರ್, ಸಿಇಓ ರಾಜೇಂದ್ರ ಜೋಷಿ ಸೇರಿದಂತೆ ಆರು ಜನರ ಮೇಲೆ ನಗರದ ದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News