×
Ad

ಯುವಕರು ನಾಗರಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಬೇಕು: ಮುಹಮ್ಮದ್ ಮೊಹ್ಸಿನ್

Update: 2022-01-30 00:32 IST

ಬೆಂಗಳೂರು, ಜ.29: ಸಮಾಜಸೇವೆಯಲ್ಲಿ ಉತ್ತಮ ಅಧಿಕಾರಿಯ ಪಾತ್ರ ಬಹುಮುಖ್ಯವಾಗಿದ್ದು, ದೀನ-ದಲಿತರು, ದುರ್ಬಲರಿಗೆ ಹಾಗೂ ಹಿಂದುಳಿದವರ ಅಭ್ಯುದಯಕ್ಕೆ ನಾಗರಿಕ ಸೇವಾ ಅಧಿಕಾರಿಯು ಸಂವಿಧಾನಾತ್ಮಕ ಮಾರ್ಗದಲ್ಲಿ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಅಭಿಪ್ರಾಯಪಟ್ಟರು.

ನಗರದಲ್ಲಿರುವ ಭಾರತೀಯ ಸಾಮಾಜಿಕ ಸಂಸ್ಥೆಯಲ್ಲಿ ರಾಜ್ಯ ವಕ್ಫ್ ಮಂಡಳಿಯಿಂದ ನಾಗರಿಕ ಸೇವಾ ಪರೀಕ್ಷೆಗಳ ಸಿದ್ಧತೆ ಕುರಿತು ಆಯೋಜಿಸಲಾಗಿದ್ದ ನೇರ ಪ್ರಸಾರದ ವೆಬಿನಾರ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮಲ್ಲಿ ಇಚ್ಛಾಶಕ್ತಿಯನ್ನು ಹೊಂದಿದ್ದು ಸತತ ಪರಿಶ್ರಮ, ಸತತ ಅಧ್ಯಯನ ಹಾಗೂ ಆತ್ಮವಿಶ್ವಾಸದಿಂದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಖಚಿತ ಯಶಸ್ಸನ್ನು ಸಾಧಿಸಬಹುದು. ಈ ನಿಟ್ಟಿಯಲ್ಲಿ ಇಂದಿನ ಯುವ ಜನಾಂಗವು ನಾಗರಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ವಕ್ಫ್ ಮಂಡಳಿಯ ಅಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಾಜುದ್ದೀನ್ ಖಾನ್ ಮಾತನಾಡಿ, ನಾಗರಿಕ ಸೇವಾ ಪರೀಕ್ಷೆಗಳ ಸಿದ್ಧತೆ ಕುರಿತು ಹಮ್ಮಿಕೊಂಡಿರುವ ಈ ವೆಬಿನಾರ್ ಕಾರ್ಯಾಗಾರ ರಾಜ್ಯದಲ್ಲಿರುವ ಎಲ್ಲ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಂತೆ ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ನಾಗರಿಕ ಸೇವಾ ಪರೀಕ್ಷೆಯ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. 

ಬೆಂಗಳೂರಿನ ಪ್ರತಿಷ್ಠಿತ ನಾಗರಿಕ ಸೇವಾ ತರಬೇತಿ ಸಂಸ್ಥೆಯಾದ ಇನ್‍ಸೈಟ್ಸ್ ಇಂಡಿಯಾ ಅಕಾಡಮಿಯ ಸ್ಥಾಪಕ ಹಾಗೂ ನಿರ್ದೇಶಕ ಜಿ.ಬಿ.ವಿನಯಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ನಾಗರಿಕ ಸೇವಾ ಪರೀಕ್ಷೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಲು ಸೂಕ್ತ ಅಧ್ಯಯನ, ಬರವಣಿಗೆ ಕೌಶಲ್ಯ ಹಾಗೂ ವಿಶ್ಲೇಷಣಾ ಕೌಶಲ್ಯವು ಅಗತ್ಯವಾಗಿದ್ದು ಇದಕ್ಕೆ ಸ್ವಯಂ ಅಧ್ಯಯನ ಹಾಗೂ ತರಬೇತಿಯು ಅತ್ಯಗತ್ಯ ಎಂದರು. 

ಅಭ್ಯರ್ಥಿಗಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿ, ಗಂಭೀರ ಅಧ್ಯಯನ ಹಾಗೂ ಪರೀಕ್ಷೆ ಕುರಿತು ಅಭ್ಯರ್ಥಿಗಳ ವಿವಿಧ ಸಮಸ್ಯೆಗಳಿಗೆ ರಾಜ್ಯ ವಕ್ಫ್ ಮಂಡಳಿಯು ಹಮ್ಮಿಕೊಂಡಿರುವ ನಾಗರಿಕ ಸೇವಾ ಪರೀಕ್ಷೆಗಳ ಸಿದ್ಧತೆ ಕುರಿತು ನೇರ ಪ್ರಸಾರದ ವೆಬಿನಾರ್ ಕಾರ್ಯಾಗಾರವು ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿ.ಮುಹಮ್ಮದ್ ಸಾದಿಕ್ ಹಿರಿಯ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಶೇಷ ಆಹ್ವಾನಿತರಿಗೆ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಝೀಷಾನ್ ಅಲಿ ಖಾನ್ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಾಗಾರದಲ್ಲಿ ರಿಝ್ವಾನುದ್ದಿನ್, ಫೈಝಿ ಕುಂದಮೇರಿ, ನದೀಮ್ ಪಟೇಲ್ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News