×
Ad

ರಾಜ್ಯದ ಪಂಚಾಯತ್ ಸಿಬ್ಬಂದಿಗೆ ಇನ್ನು ಆನ್‌ಲೈನ್ ವೇತನ

Update: 2022-01-30 08:32 IST

ಬೆಂಗಳೂರು: ರಾಜ್ಯದ 60 ಸಾವಿರಕ್ಕೂ ಅಧಿಕ ಮಂದಿ ಪಂಚಾಯತ್ ಸಿಬ್ಬಂದಿಯ ವೇತನವನ್ನು ಇನ್ನು ಆನ್‌ಲೈನ್ ವಿಧಾನದಲ್ಲಿ ಪಾವತಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಪ್ರತಿ ತಿಂಗಳ 5ನೇ ತಾರೀಕಿನ ಒಳಗಾಗಿ ನೇರವಾಗಿ ಸಿಬ್ಬಂದಿಯ ಬ್ಯಾಂಕ್ ಖಾತೆಗಳಿಗೆ ವೇತನ ವರ್ಗಾವಣೆಯಾಗಲಿದೆ.

ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಹೊಸ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಇಎಫ್‌ಎಂಎಸ್) ಜಾರಿಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಎಲ್ಲ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆರ್‌ಡಿಪಿಆರ್‌ ನ ಪಂಚತಂತ್ರ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವ ಇಎಫ್‌ಎಂಎಸ್ ವ್ಯವಸ್ಥೆಯಡಿ ಆನ್‌ಲೈನ್ ಪಾವತಿ ಮಾಡಲಾಗುತ್ತದೆ ಎಂದು ಅತೀಕ್ ವಿವರಿಸಿದರು. ಮೊದಲ ಬಾರಿಗೆ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರದ ಪಂಚಾಯ್ತಿಗಳಲ್ಲಿ ಇದನ್ನು ಜಾರಿಗೊಳಿಸಲಾಗಿತ್ತು. ಇದನ್ನು ಈಗ ರಾಜ್ಯದ 5960 ಪಂಚಾಯ್ತಿಗಳಿಗೆ ವಿಸ್ತರಿಸಲಾಗಿದೆ. ಪ್ರತಿ ವರ್ಷ ಸುಮಾರು 900 ಕೋಟಿ ರೂಪಾಯಿ ವೇತನ ಗ್ರಾಮಪಂಚಾಯ್ತಿ ಸಿಬ್ಬಂದಿಗೆ ಪಾವತಿಯಾಗುತ್ತಿದೆ.

ಇದುವರೆಗೆ ಚೆಕ್ ಮೂಲಕ ವೇತನ ಪಾವತಿಸಲಾಗುತ್ತಿತ್ತು. ಆದರೆ ಅನಿಯಮಿತ ಪಾವತಿ ಸಮಸ್ಯೆಯನ್ನು ಸಿಬ್ಬಂದಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಾವತಿ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಸುಧೀರ್ಘ ಕಾಲದಿಂದ ಬೇಡಿಕೆ ಇತ್ತು. ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪಂಚಾಯ್ತಿ ಸಿಬ್ಬಂದಿಯಿಂದ ಪ್ರತಿಭಟನೆಯೂ ನಡೆದಿತ್ತು. ಹೊಸ ವ್ಯವಸ್ಥೆಯಲ್ಲಿ ಆಧಾರ್ ಸಂಪರ್ಕಿತ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಸಲಾಗುತ್ತದೆ. ಈ ಹೊಸ ವ್ಯವಸ್ಥೆ ನಿಯತ ವೇತನ ಪಾವತಿಗೆ ಅನುಕೂಲವಾಗುವುದು ಮಾತ್ರವಲ್ಲದೇ ಸೋರಿಕೆ ತಡೆಗೂ ಮಹತ್ವದ ಕ್ರಮವಾಗಿದೆ ಎಂದು ಅತೀಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News