ಸಿರಿಯಾ: ಜೈಲಿನ ಸಮೀಪ ಘರ್ಷಣೆಯಲ್ಲಿ 332 ಮಂದಿ ಮೃತ್ಯು

Update: 2022-01-30 18:31 GMT
ಸಾಂದರ್ಭಿಕ ಚಿತ್ರ

ದಮಾಸ್ಕಸ್, ಜ.30: ಸಿರಿಯಾದ ಜೈಲಿನ ಸಮೀಪ ಕುರ್ಡಿಶ್ ಪಡೆಗಳು ಹಾಗೂ ದಯಿಶ್ ಸಶಸ್ತ್ರ ಪಡೆ ನಡುವೆ ನಡೆದ ಘರ್ಷಣೆಯಲ್ಲಿ 332 ಮಂದಿ ಮೃತಪಟ್ಟಿರುವುದಾಗಿ ಸಿರಿಯಾದ ಮಾನವ ಹಕ್ಕು ವೀಕ್ಷಣಾ ಸಮಿತಿ ವರದಿ ಮಾಡಿದೆ.

ಈಶಾನ್ಯ ಸಿರಿಯಾದ ಹಸಾಕಾ ನಗರದಲ್ಲಿನ ಘ್ವಾಯ್ರಾನ್ ಜೈಲು ಆವರಣದ ಸಮೀಪಕ್ಕೆ ಜನವರಿ 20ರಂದು ದಯಿಶ್ ಪಡೆ ದಾಳಿ ನಡೆಸಿದಾಗ ಭುಗಿಲೆದ್ದ ಸಂಷರ್ಘ ಇನ್ನೂ ಮುಂದುವರಿದಿದೆ. ಜೈಲನ್ನು ಮರಳಿ ವಶಕ್ಕೆ ಪಡೆದಿರುವುದಾಗಿ ಅಮೆರಿಕ ನೇತೃತ್ವದ ಸಿರಿಯನ್ ಡೆಮೊಕ್ರಾಟಿಕ್ ಪಡೆ(ಎಸ್‌ಡಿಎಫ್) ಬುಧವಾರ ಘೋಷಿಸಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದಿವೆ. ಈ ಮಧ್ಯೆ, ಶನಿವಾರ ಮತ್ತೆ ಜೈಲಿನ ಸುತ್ತಮುತ್ತ ದಯಿಶ್ ಪಡೆಯಿಂದ ಗುಂಡಿನ ದಾಳಿ ಆರಂಭವಾಗಿದ್ದು ಸಿರಿಯಾ ಡೆಮೊಕ್ರಾಟಿಕ್ ಪಡೆ ಹಾಗೂ ಕುರ್ಡಿಶ್ ಭದ್ರತಾ ಪಡೆ ಜಂಟಿಯಾಗಿ ಪ್ರತ್ಯುತ್ತರ ನೀಡುತ್ತಿವೆ . ಈ ಮಧ್ಯೆ, ಓರ್ವ ಅಧಿಕಾರಿ ಹಾಗೂ 3 ನಾಗರಿಕರನ್ನು ದಯಿಶ್ ಪಡೆ ಒತ್ತೆಸೆರೆಯಲ್ಲಿರಿಸಿಕೊಂಡಿದೆ ಎಂದು ಮಾನವ ಹಕ್ಕು ಸಮಿತಿ ಹೇಳಿದೆ.

ಜೈಲಿನೊಳಗೆ ನುಗ್ಗಿದ್ದ ಸುಮಾರು 3,500 ದಯಿಶ್ ಸದಸ್ಯರು ಶರಣಾಗಿದ್ದಾರೆ ಎಂದು ಎಸ್‌ಡಿಎಫ್ ಘೋಷಿಸಿದೆ. ಆದರೆ ಇವರು ಜೈಲಿನೊಳಗಿನ ಕೊಠಡಿಯಲ್ಲಿ ಬ್ಯಾರಿಕೇಡ್ ಸ್ಥಾಪಿಸಿಕೊಂಡು ಅಡಗಿದ್ದು ಈ ಸ್ಥಳದ ಮೇಲೆ ವಾಯುದಾಳಿ ನಡೆಸುವುದು ಅಥವಾ ಸೇನಾ ಕಾರ್ಯಾಚರಣೆ ನಡೆಸುವುದು ಕಠಿಣ ಕಾರ್ಯವಾಗಿದೆ ಎಂದು ವರದಿಯಾಗಿದೆ. ಈ ಕಟ್ಟಡವನ್ನು ಕುರ್ಡಿಶ್ ಪಡೆ ಹಾಗೂ ಎಸ್‌ಡಿಎಫ್ ಸುತ್ತುವರಿದಿದ್ದು ಶರಣಾಗುವಂತೆ ಪದೇ ಪದೇ ಸೂಚಿಸಲಾಗುತ್ತಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News