ಮರಗಳ್ಳರ ಮೇಲೆ ಕ್ರಮ ಕೈಗೊಂಡ ಅರಣ್ಯಾಧಿಕಾರಿ ಸಂಧ್ಯಾರ ವರ್ಗಾವಣೆಗೆ ತಡೆ?

Update: 2022-01-31 10:29 GMT
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗೆ ಬರೆದಿದ್ದೆನ್ನಲಾದ ಪತ್ರ.

ಬೆಳ್ತಂಗಡಿ, ಜ.31: ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯನ್ನು ಬೀದರಿಗೆ ವರ್ಗಾಯಿಸುವಂತೆ ಬೆಳ್ತಂಗಡಿ ಶಾಸಕ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಘಟನೆಯಲ್ಲಿ ಇದೀಗ ಅಧಿಕಾರಿಯನ್ನು ಈಗ ಇರುವ ಹುದ್ದೆಯಲ್ಲಿಯೇ ಮುಂದುವರಿಯಲು ಸೂಚಿಸಿರುವುದಾಗಿ ತಿಳಿದು ಬಂದಿದೆ.

ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ನಿಯೋಜನೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಾಧಿಕಾರಿ ಸಂಧ್ಯಾರನ್ನು ಬೀದರಿಗೆ ವರ್ಗಾವಣೆ ಮಾಡುವಂತೆ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಯವರಿಗೆ ಬರೆದಿದ್ದ ಪತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪತ್ರದಲ್ಲಿ ಮುಖ್ಯಮಂತ್ರಿಯವರು ವರ್ಗಾಯಿಸುವುದು ಎಂದು ರುಜು ಹಾಕಿರುವುದು ಹಾಗೂ ತನ್ನ ಮೇಲೆ ವೈಯುಕ್ತಿಕ ದ್ವೇಷದಿಂದ ವರ್ಗಾವಣೆ ಮಾಡಲಾಗಿದೆ, ಬೆಳ್ತಂಗಡಿಯಲ್ಲಿ ಮರಗಳ್ಳರ ಮೇಲೆ ಕ್ರಮ ಕೈಗೊಂಡ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸಂಧ್ಯಾ ಬರೆದಿರುವ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಶಾಸಕರ ಪತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಈ ಬಗ್ಗೆ ಬೆಳ್ತಂಗಡಿ ತಾಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದವರು ಸೇಡಿನ ವರ್ಗಾವಣೆ ಮಾಡದಿರುವಂತೆ ಒತ್ತಾಯಿಸಿದ್ದರು.

ಇದೀಗ ಲಭ್ಯ ಮಾಹಿತಿಯಂತೆ ಸಂಧ್ಯಾರ ವರ್ಗಾವಣೆ ಮಾಡದಿರುವ ನಿರ್ಧಾರಕ್ಕೆ ಸರಕಾರ ಬಂದಿದೆ ಎನ್ನಲಾಗಿದೆ. ಅವರು ಹಿಂದೆ ನಿರ್ವಹಿಸುತ್ತಿದ್ದ ಹುದ್ದೆಯಲ್ಲಿಯೇ ಮುಂದುವರಿಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News