ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸುವಲ್ಲಿ ಕೇಂದ್ರ ಬಜೆಟ್ ವಿಫಲವಾಗಿದೆ: ಮಲ್ಲಿಕಾರ್ಜುನ ಖರ್ಗೆ

Update: 2022-02-02 18:23 GMT
ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ,ಫೆ.2: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸುವಲ್ಲಿ ಕೇಂದ್ರ ಸರಕಾರದ ನೂತನ ಬಜೆಟ್ ವಿಫಲವಾಗಿದೆಯೆಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ತಿಳಿಸಿದ್ದಾರೆ. 2014ರಲ್ಲಿ ಮೋದಿ ಸರಕಾರವು ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಒದಗಿಸುವ ಖಾತರಿ ನೀಡಿತ್ತು. ಆದರೆ ಈ ವರ್ಷ ಅದು ಮುಂದಿನ ಐದು ವರ್ಷಗಳಲ್ಲಿ ಕೇವಲ 60 ಲಕ್ಷ ಉದ್ಯೋಗಗಳ ಭರವಸೆ ನೀಡಿದೆಯೆಂದು ಖರ್ಗೆ ಟೀಕಿಸಿದರು. 

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಂಸತ್ ಭಾಷಣದ ಬಗ್ಗೆ ರಾಜ್ಯಸಭೆಯಲ್ಲಿ ವಂದನಾ ಗೊತ್ತುವಳಿಯ ಚರ್ಚೆಯಲ್ಲಿ ಪಾಲ್ಗೊಂಡು ಅವರ ಮಾತನಾಡುತ್ತಿದ್ದರು. ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಮುಚ್ಚುಗಡೆಗೊಂಡಿದ್ದು, ಹೂಡಿಕೆಗಳು ಹರಿದು ಬರುತ್ತಿಲ್ಲ ಹಾಗೂ ಸರಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದೆ ಎಂದು ಖರ್ಗೆ ಹೇಳಿದರು.

‘‘2014ರಲ್ಲಿ ನೀವು ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರಸೆ ನೀಡಿದ್ದೀರಿ. ಹಾಗೆ ನೋಡಿದರೆ ಈವರೆಗೆ ನೀವು 15 ಕೋಟಿ ಉದ್ಯೋಗಗಳನ್ನು ಒದಗಿಸಬೇಕಿತ್ತು. ಆದರೆ ವಾಸ್ತವಿಕವಾಗಿ ನೀವು ಎಷ್ಟು ಉದ್ಯೋಗಗಳನ್ನು ಒದಗಿಸಿದ್ದೀರಿ’’ ಎಂದು ಖರ್ಗೆ ಪ್ರಶ್ನಿಸಿದರು.

ಪ್ರಸಕ್ತ ದೇಶದಲ್ಲಿ 2 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ ಹಾಗೂ ಶೇ.60ಷ್ಟು ಸೂಕ್ಷ್ಮ, ಸಣ್ಣ ಹಾಗೂ ಮಧ್ಯ ಕೈಗಾರಿಕೆಗಳು ಮುಚ್ಚುಗಡೆಗೊಂಡಿದೆಯೆಂದವರು ಸದನದ ಗಮನಸೆಳೆದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ನಿರುದ್ಯೋಗ ದರವು ಶೇ.7.9ಕ್ಕೆ ನಿಂತುಕೊಂಡಿದ್ದು, ಸುಮಾರು 3.50 ಕೋಟಿ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆಂದು ‘ಭಾರತೀಯ ಆರ್ಥಿಕತೆ ಕಣ್ಗಾವಲು ಕೇಂದ್ರ’ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿರುವುದಾಗಿ ಖರ್ಗೆ ಸದನದ ಗಮನಸೆಳೆದರು.
 
ರೈಲ್ವೆಯಲ್ಲಿ ಶೇ.15, ರಕ್ಷಣೆಯಲ್ಲಿ ಶೇ.40 ಹಾಗೂ ಆಂತರಿಕ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ಶೇ.12ರಷ್ಟು ಹುದ್ದೆಗಳು ಭರ್ತಿಯಾಗದೆ ಖಾಲಿಬಿದ್ದಿವೆ ಎಂದವರು ಹೇಳಿದರು.
 
ಕೊರೋನ ವೈರಸ್ ಸಾಂಕ್ರಾಮಿಕ ತಂದಿರುವ ಸಂಕಷ್ಟ ಹಾಗ ಹಣದುಬ್ಬರದಿಂದ ಬಾಧಿತರಾದ ಬಡವರು, ವೇತನದಾರವರ್ಗ ಹಾಗೂ ಮಧ್ಯಮವರ್ಗಕ್ಕೆ ಈ ಬಜೆಟ್ ಏನನ್ನೂ ನೀಡಿಲ್ಲವೆಂದು ಖರ್ಗೆ ಟೀಕಿಸಿದರು.

ಎಂನರೇಗಾ ಅನುದಾನ ಕಡಿತಕ್ಕೆ ಖಂಡನೆ

ಬಜೆಟ್‌ನಲ್ಲಿ  ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ (ಎಂನರೇಗಾ) ಅನುದಾನ ಕಡಿತಗೊಳಿಸಿರುವುದನ್ನೂ ಖರ್ಗೆ ಖಂಡಿಸಿದರು. ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಎಂನರೇಗಾ ಯೋಜನೆಯು ಕೆಲಸ ಕಳೆದುಕೊಂಡಕಾರ್ಮಿಕರ ಪಾಲಿಗೆ ಸಂಜೀವಿನಿಯಾಗಿತ್ತು. ಎಂನರೇಗಾಗೆ ಸುಮಾರು 1.80 ಲಕ್ಷ ಕೋಟಿ ರೂ. ಅನುದಾನ ನೀಡಬೇಕಿತ್ತು. ಆದರೆ ನೀವು ಕೇವಲ 73 ಸಾವಿರ ಕೋಟಿ ರೂ. ಮೀಸಲಿರಿಸಿದ್ದೀರಿ ಎಂದವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News