ಸಾಮಾಜಿಕ ಮಾಧ್ಯಮಕ್ಕೆ ʼಕಠಿಣ ನಿಯಮʼ ತರಲು ಕೇಂದ್ರ ಚಿಂತನೆ: ರಾಜ್ಯಸಭೆಗೆ ತಿಳಿಸಿದ ಸಚಿವ ಅಶ್ವಿನಿ ವೈಷ್ಣವ್

Update: 2022-02-04 16:21 GMT
Photo : Financial Express

ಹೊಸದಿಲ್ಲಿ, ಫೆ. 4: ಸದನದಲ್ಲಿ ಒಮ್ಮತ ಮೂಡಿದರೆ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಉತ್ತರದಾಯಿಯನ್ನಾಗಿ ಮಾಡುವ ಕಠಿಣ ನಿಯಮಗಳನ್ನು ಜಾರಿಗೆ ತರುವ ಹಾಗೂ ಅಂತರ್ಜಾಲದಲ್ಲಿ ಪ್ರಜೆಗಳಿಗೆ ಸುರಕ್ಷತೆಯ ಖಾತರಿ ನೀಡುವ ಇಚ್ಛೆಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ರಾಜ್ಯ ಸಭೆಗೆ ತಿಳಿಸಿದ್ದಾರೆ. 

ಸಾಮಾಜಿಕ ಮಾಧ್ಯಮ ಕಂಪೆನಿಗಳ ಹೆಚ್ಚು ಉತ್ತರದಾಯಿತ್ವದ ಕುರಿತಂತೆ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ ಅವರ ಪ್ರಶ್ನೆಯೊಂದಕ್ಕೆ ವೈಷ್ಣವ್ ಅವರು ಈ ಪ್ರತಿಕ್ರಿಯೆ ನೀಡಿದರು. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ (ಸಿಇಆರ್‌ಟಿ-ಇನ್) ಅಥವಾ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವರದಿಯ ಆಧಾರದಲ್ಲಿ ಕಾನೂನು ಜಾರಿನಿರ್ದೇಶನಾಲಯ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು. 

ಇಂತಹ ಪ್ರಕರಣಗಳನ್ನು ನೋಂದಣಿ ಮಾಡಲು ಹಾಗೂ ಸಂಬಂಧಿತ ಕಾನೂನು ಅನುಷ್ಠಾನ ಸಂಸ್ಥೆಗೆ ಕಳುಹಿಸಿ ಕೊಡಲು ಕೇಂದ್ರೀಯ ಪೋರ್ಟಲ್ ಇದೆ. ನಾವು ಸಮಾಜವಾಗಿ ಮುಂದೆ ಬರಬೇಕು ಹಾಗೂ ಹೆಚ್ಚಿನ ಹೊಣೆಗಾರಿಕೆಯ ಪ್ರದರ್ಶಿಸಬೇಕು ಎನ್ನುವ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ ಎಂದರು. ಒಪ್ಪಿಗೆ ಇಲ್ಲದೆ ಸುಮಾರು 100 ಮುಸ್ಲಿಂ ಮಹಿಳೆಯರ ಭಾವಚಿತ್ರ ಹಾಗೂ ವಿವರಗಳನ್ನು ಹಂಚಿಕೊಂಡ ಬಳಿಕ ಜನರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ‘ಬುಲ್ಲಿ ಬಾಯಿ’ಯಂತಹ ಅಪ್ಲಿಕೇಶನ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ವೈಷ್ಣವ್ ಒತ್ತಾಯಿಸಿದರು. 

ಇದು ಕೇವಲ ಧರ್ಮಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಮಹಿಳೆಯರಿಗೆ ರಕ್ಷಣೆಗೆ ಕೂಡ ಸಂಬಂಧಿಸಿದೆ ಎಂದು ವೈಷ್ಣವ್ ಹೇಳಿದರು. ‘‘ನಾವು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ. ಮಹಿಳೆಯರು ಸುರಕ್ಷಿತವಾಗಿರಲು ಸಾಮಾಜಿಕ ಮಾದ್ಯಮದ ವ್ಯವಸ್ಥೆಯನ್ನು ಉತ್ತರದಾಯಿಯನ್ನಾಗಿ ರೂಪಿಸಲು ಒಮ್ಮತಕ್ಕೆ ಬರುವ ಅಗತ್ಯತೆ ಇದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News