ಗಾಂಜಾ ಸೇವನೆ ಆರೋಪ: ಇಬ್ಬರು ಯುವಕರ ಬಂಧನ
Update: 2022-02-04 22:44 IST
ಮಂಗಳೂರು, ಫೆ.4: ಗಾಂಜ ಸೇವನೆ ಮಾಡಿದ ಆರೋಪದ ಮೇಲೆ ಮಂಗಳೂರು ಸೆನ್ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಸೆನ್ ಪೊಲೀಸರು ಶುಕ್ರವಾರ ಬೆಳಗ್ಗೆ 10:30ಕ್ಕೆ ಗಸ್ತು ನಿರತರಾಗಿದ್ದ ವೇಳೆ ಬಿಜೈ ಸರಕಾರಿ ಬಸ್ ನಿಲ್ದಾಣದ ಬಳಿ ಯುವಕನೋರ್ವ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸಾಗರ್ ಬಂಗೇರಾ (21) ಎಂಬಾತನನ್ನು ಬಂಧಿಸಿದ್ದಾರೆ.
ಚಿಲಿಂಬಿಯಲ್ಲಿ ಯುವಕನೋರ್ವ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸೆನ್ ಪೊಲೀಸರು ವಸಂತ್ ಪೂಜಾರಿ (22) ಎಂಬಾತನನ್ನು ಬಂದಿಸಿದ್ದಾರೆ. ಈತನೂ ಗಾಂಜ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.