ಜಿಲ್ಲಾ ಮಟ್ಟದ ರಂಗ ಮಂದಿರ ನಿರ್ಮಾಣಕ್ಕೆ 5 ಕೋಟಿ ರೂ. ತಾಲೂಕು ಮಟ್ಟಕ್ಕೆ 3 ಕೋಟಿ ರೂ.: ಸುನಿಲ್ ಕುಮಾರ್

Update: 2022-02-05 12:24 GMT

ಮಂಗಳೂರು, ಫೆ.5: ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ರಂಗ ಮಂದಿರ ಬಜೆಟ್ ಬಗ್ಗೆ ಏಕಸೂತ್ರ ಜಾರಿಗೆ ಕ್ರಮ ವಹಿಸಲಾಗಿದೆ ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವಾರದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ರಂಗ ಮಂದಿರ ನಿರ್ಮಿಸಲುದ್ದೇಶಿಸಿರುವ ಜಾಗ ಅತಿಕ್ರಮಣ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು. ಆದರೆ ರಂಗ ಮಂದಿರ ಬಜೆಟ್ ಬಗ್ಗೆ ಸಾಕಷ್ಟು ತಕರಾರಿದೆ. ಹಾಗಾಗಿ ಜಿಲ್ಲಾ ಮಟ್ಟದ ರಂಗ ಮಂದಿರಕ್ಕೆ 5 ಕೋಟಿರೂ. ತಾಲೂಕು ಮಟ್ಟಕ್ಕೆ ತಲಾ 3 ಕೋಟಿರೂ. ನೀಡಲಾಗುವುದು. ಹೆಚ್ಚುವರಿ ಮೊತ್ತವನ್ನು ಸ್ಥಳೀಯಾಡಳಿತವೇ ಭರಿಸಬೇಕೆಂಬ ನಿಟ್ಟಿನಲ್ಲಿ ಸೂತ್ರ ರಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೂ ಆಗಿರುವ ಸುನಿಲ್ ಕುಮಾರ್ ಹೇಳಿದರು.

ಅಕ್ರಮ ಗೋಸಾಟದ ಬಗ್ಗೆ ಕ್ರಮಕ್ಕೆ ಸೂಚನೆ

ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟವನ್ನು ಹದ್ದುಬಸ್ತಿನಲ್ಲಿಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏನು ಬೇಕಾದರೂ ಮಾಡಿ ಬದುಕಬಹುದು ಎಂಬುದರ ಕುರಿತಂತೆ ಕ್ರಮ ವಹಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅವರು ಈ ನಿಟ್ಟಿನಲ್ಲಿ ಕ್ರಮ ವಹಿಸುವ ವಿಶ್ವಾಸವಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿ ಕಾನೂನು ಕೆಗೆತ್ತಿಕೊಲ್ಳುವುದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಪಂಪ್‌ವೆಲ್‌ನಲ್ಲಿ ಬಸ್ಸು ನಿಲ್ದಾಣ ಬಗ್ಗೆ ಶೀಘ್ರ ಕ್ರಮ

ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಸರ್ವಿಸ್ ಬಸ್ಸು ನಿಲ್ದಾಣದ ಕುರಿತಂತೆ ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಇದು ಸುಮಾರು 440 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಯಾಗಿದೆ. ಮಾತ್ರವಲ್ಲದೆ ಇದಕ್ಕಾಗಿ ನಿಗದಿಪಡಿಸಲಾಗಿರುವ ಜಾಗ ರಾಷ್ಟ್ರೀಯ ಹೆದ್ದಾರಿಯಿಂದ ಕೆಳಗೆ ಇರುವುದರಿಂದ ಅದನ್ನು ಹೆದ್ದಾರಿ ಎತ್ತರಕ್ಕೆ ಏರಿಸಬೇಕಾದರೆ ಸಾಕಷ್ಟು ವೆಚ್ಚವಾಗಲಿದೆ. ಹಾಗಾಗಿ ಆ ಜಾಗದಲ್ಲಿ ಸುಮಾರು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಸ್ಸು ನಿಲ್ದಾಣಕ್ಕೆ ಟೆಂಡರ್ ಕರೆಯಲು ಚಿಂತನೆ ಮಾಡಲಾಗಿದೆ. ಆ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಮತ್ತೆ ಸಚಿವ ಸಂಪುಟದಿಂದ ಅನುಮೋದನೆ ಪಡೆಯುವ ಅಗ್ಯವಿದೆ ಎಂದು ಸಂವಾದದಲ್ಲಿ ಉಪಸ್ಥಿತರಿದ್ದ ಶಾಸಕ ವೇದವ್ಯಾಸ ಕಾಮತ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವಿದ್ಯುತ್ ಬೆಲೆ ಏರಿಕೆ ಪ್ರಸ್ತಾಪ ಸರಕಾರದ ಮುಂದಿಲ್ಲ

ವಿದ್ಯುತ್ ದರ ಏರಿಕೆ ಮಾಡುವುದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ವಾಗಿದ್ದು, ಆದರೆ ಸರಕಾರದ ಎದುರು ವಿದ್ಯುತ್ ಬೆಲೆ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ಪೂರೆಕೆ , ಕಾರ್ಯಕ್ಷಮತೆ ಹೆಚ್ಚಿಸಿ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಷ್ಕರಿಸಿದ ವಿತರಣಾ ವಲಯದ ಯೋಜನೆಯಡಿ (ಆರ್‌ಡಿಎಸ್‌ಎಸ್) 8000 ಕೋಟಿ ರೂ. ರಾಜ್ಯಕ್ಕೆ ಒದಗಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಧಿಕೃತ ಜೋಡಣೆ, ಸೋರಿಕೆ ತಡೆಯನ್ನು ಸ್ಥಳೀಯಾಡಳಿತ ಮಾಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News