×
Ad

ಮಂಗಳೂರು: ಹಿಜಾಬ್ ವಿವಾದ ಖಂಡಿಸಿ ಪ್ರತಿಭಟನೆ

Update: 2022-02-05 21:39 IST

ಮಂಗಳೂರು, ಫೆ.5: ಹಿಜಾಬ್ ವಿವಾದ ಹುಟ್ಟು ಹಾಕಿ ಸಮಸ್ಯೆ ಸೃಷ್ಟಿಸುವ ದುಷ್ಕೃತ್ಯವನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಬಿಜೆಪಿ ಸರಕಾರ ಕೋಮುದ್ವೇಷದ ಬೀಜ ಬಿತ್ತುತ್ತಿವೆ, ಸಂಘ ಪರಿವಾರದ ಅನತಿಯಂತೆ ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಹುಟ್ಟು ಹಾಕಿ ಮತೀಯ ಗಲಭೆಗೆ ಷಡ್ಯಂತ್ರ ರೂಪಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳ ಮುಖಂಡ ಎಂ.ದೇವದಾಸ್ ಮಾತನಾಡಿ ಇಂದು ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಅದನ್ನು ಸಹಿಸಲು ಬಿಜೆಪಿ, ಸಂಘಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬೇಕು ಎಂಬ ಷಡ್ಯಂತ್ರವು ಹಿಜಾಬ್ ವಿವಾದದಲ್ಲಿ ಅಡಗಿದೆ. ಇದರ ವಿರುದ್ಧ ಆರಂಭದಲ್ಲೇ ಧ್ವನಿ ಎತ್ತಬೇಕು. ಇಲ್ಲದಿದ್ದರೆ ದೇಶದ ಭವಿಷ್ಯವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂದು ಹೇಳಲಿಕ್ಕೆ ಆಗದು ಎಂದು ಆತಂಕ ವ್ಯಕ್ತಪಡಿಸಿದರು.

ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ ಉಡುಪಿ ಮತ್ತು ಕುಂದಾಪುರದ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಜನಾಂಗೀಯ ದ್ವೇಷಿಗಳು. ಸೃಷ್ಟಿಯಾದ ಸಮಸ್ಯೆಯನ್ನು ಬೆಳೆಯಲು ಬಿಟ್ಟ ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಸಚಿವ ಸುನೀಲ್ ಕುಮಾರ್, ಶಾಸಕ ರಘುಪತಿ ಭಟ್ ಹಿಜಾಬ್ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಕಲಿಯುವ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹೆಣ್ಮಕ್ಕಳು ಹಿಜಾಬ್ ಧರಿಸಿದರೆ ಮಾತ್ರ ಇವರಿಗೆ ಸಮಸ್ಯೆಯಾ? ಸಂಘಪರಿವಾರದ ಮುಖಂಡ ಎಂ.ಬಿ.ಪುರಾಣಿಕ್, ಬಿಜೆಪಿ ನಾಯಕ ಗಣೇಶ್ ರಾವ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಶ್ರೀಮಂತ ಕುಟುಂಬದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬಗ್ಗೆ ಈ ನಾಯಕರ ನಿಲುವು ಏನು ಎಂಬುದನ್ನು ಸ್ಪಷ್ಪಪಡಿಸಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ, ನಿವೃತ್ತ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ದಯಾನಂದ ಶೆಟ್ಟಿ, ಪದ್ಮಾವತಿ ಶೆಟ್ಟಿ, ಜೆಡಿಎಸ್ ನಾಯಕಿ ಸುಮತಿ ಹೆಗ್ಡೆ, ವಿವಿಧ ಸಂಘಟನೆಗಳ ಮುಖಂಡರಾದ ವಾಸುದೇವ ಉಚ್ಚಿಲ್. ಸಂತೋಷ್ ಕುಮಾರ್ ಬಜಾಲ್, ರಫೀಕ್ ಹರೇಕಳ, ಝೀನತ್, ಹುಸೈನ್ ಕಾಟಿಪಳ್ಳ, ಭಾರತಿ ಬೋಳಾರ, ನಿತಿನ್ ಬಂಗೇರಾ, ನೌಶಾದ್ ಬೆಂಗರೆ, ಸದಾಶಿವ ದಾಸ್. ರಘು ಎಕ್ಕಾರ್, ವಿಲಾಸಿನಿ, ಮುಹಮ್ಮದ್ ಮುಸ್ತಫಾ, ಮುಹಮ್ಮದ್ ಶಾಲಿ ಬಜ್ಪೆ, ಸಿರಾಜ್ ಬಜ್ಪೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News