ಆರ್ಥಿಕ ನೆರವಿನ ನಿರೀಕ್ಷೆ: ಚೀನಾದ ಪ್ರೀಮಿಯರ್ ಜತೆ ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಸಭೆ

Update: 2022-02-06 17:01 GMT

ಬೀಜಿಂಗ್, ಫೆ.6: ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸಲು ಪ್ರಯಾಸಪಡುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಚೀನಾದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದು ಆ ದೇಶದ ಪ್ರೀಮಿಯರ್ ಲಿ ಕೆಖಿಯಾಂಗ್ ಜತೆ ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ.

ನಾಲ್ಕು ದಿನಗಳ ಚೀನಾ ಭೇಟಿಯಲ್ಲಿರುವ ಇಮ್ರಾನ್, ಶನಿವಾರ ಚೀನಾದ ಪ್ರೀಮಿಯರ್ ಕೆಖಿಯಾಂಗ್ ಹಾಗೂ ಅಲ್ಲಿನ ಪ್ರಮುಖ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳ ಮುಖ್ಯಸ್ಥರದೊಂದಿಗೆ ಸಮಾಲೋಚನೆ ನಡೆಸಿದ್ದು ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಚೀನಾದ ಉತ್ಪನ್ನಗಳಿಗೆ ತಮ್ಮ ಸರಕಾರದ ಬೆಂಬಲವನ್ನು ಮುಂದುವರಿಸುವ ವಾಗ್ದಾನ ನೀಡಿದರು. ಚೀನಾದ ಸಂಸ್ಥೆಗಳು ಪಾಕಿಸ್ತಾನದೊಂದಿಗಿನ ವ್ಯವಹಾರ ಸಂಬಂಧ ವೃದ್ಧಿಸುವಲ್ಲಿ ತೋರಿದ ಆಸಕ್ತಿಯನ್ನು ಶ್ಲಾಘಿಸಿದ ಅವರು, ಪಾಕಿಸ್ತಾನದ ವಿಶೇಷ ಆರ್ಥಿಕ ವಲಯದಲ್ಲಿ ಹೂಡಿಕೆ ಮಾಡುವ ವಿದೇಶಿ ಸಂಸ್ಥೆಗಳಿಗೆ, ವಿಶೇಷವಾಗಿ ಚೀನಾದ ಸಂಸ್ಥೆಗಳಿಗೆ ಹಲವು ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಿದರು. 

ಈ ಮಾತುಕತೆ ಸಂದರ್ಭ ಸಚಿವ ಸಂಪುಟದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಪ್ರಧಾನಿಯ ನಿಯೋಗದಲ್ಲಿದ್ದರು ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಬೀಜಿಂಗ್ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್, ಬಳಿಕ ಚೀನಾದ ಪ್ರಮುಖ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಲ್ಲದೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನ ದ್ವಿತೀಯ ಹಂತಕ್ಕೆ (ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗುವ ವಿವಾದಾತ್ಮಕ ಯೋಜನೆ) ಚಾಲನೆ ನೀಡುವ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದರು. 

ಶನಿವಾರ ಚೀನಾದ ಪ್ರಮುಖ ಉದ್ದಿಮೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು ಈ ಸಂದರ್ಭ ಇಂಧನ, ಸಂಸ್ಕರಣೆ, ಪೆಟ್ರೊಕೆಮಿಕಲ್, ಮೂಲಸೌಕರ್ಯ ಅಭಿವೃದ್ಧಿ, ಜಲ ಸಂಪನ್ಮೂಲ ನಿರ್ವಹಣೆ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಇತ್ಯಾದಿಗಳಲ್ಲಿ ಚಾಲ್ತಿಯಲ್ಲಿರುವ ಚೀನಾದ ಯೋಜನೆಗಳು ಹಾಗೂ ಭವಿಷ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು ಅಧಿಕಾರಿಗಳು ಹೇಳಿದ್ದಾರೆ. ವಿದೇಶಿ ವಿನಿಮಯ ಸಂಗ್ರಹ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾದಿಂದ ಇನ್ನಷ್ಟು ಸಾಲ ಪಡೆಯುವುದು ಪಾಕಿಸ್ತಾನ ಸರಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News