ಪಾಕಿಸ್ತಾನದ 31% ಯುವಜನತೆ ನಿರುದ್ಯೋಗಿಗಳು: ಅಧ್ಯಯನ ವರದಿ

Update: 2022-02-07 17:15 GMT
SORCE: PTI

ಇಸ್ಲಮಾಬಾದ್, ಫೆ.7: ದೇಶದಲ್ಲಿನ 31% ಯುವಜನತೆ ನಿರುದ್ಯೋಗಿಗಳಾಗಿದ್ದು ಇದರಲ್ಲಿ ಮಹಿಳೆಯರ ಪ್ರಮಾಣ 51% ಆಗಿದೆ ಎಂದು ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಇಕನಾಮಿಕ್ಸ್ ರವಿವಾರ ವರದಿ ಮಾಡಿದೆ. ಒಟ್ಟು 31% ನಿರುದ್ಯೋಗಿಗಳಲ್ಲಿ ಪುರುಷರ ಪ್ರಮಾಣ 16% ಆಗಿದೆ. ಹಲವು ನಿರುದ್ಯೋಗಿಗಳು ಪದವೀಧರರಾಗಿರುವುದು ದೇಶದಲ್ಲಿನ ನಿರುದ್ಯೋಗದ ಸಮಸ್ಯೆಗೆ ಕೈಗನ್ನಡಿ ಹಿಡಿದಿದೆ. ಪಾಕಿಸ್ತಾನದ ಜನಸಂಖ್ಯೆಯಲ್ಲಿ 30 ವರ್ಷಕ್ಕಿಂತ ಕೆಳಗಿನವರ ಪ್ರಮಾಣ ಸುಮಾರು 60%ರಷ್ಟು ಆಗಿದ್ದು ಈಗ ನಿರುದ್ಯೋಗದ ಪ್ರಮಾಣ 6.9% ಆಗಿದೆ ಎಂದು ವರದಿ ಹೇಳಿದೆ.
  
ಪಾಕಿಸ್ತಾನದಲ್ಲಿ ಯುವಜನತೆಗೆ ಪ್ರಾಮುಖ್ಯತೆಯಿದೆ ಮತ್ತು ಜನಸಂಖ್ಯಾ ಸಂಪನ್ಮೂಲದ ಪ್ರಯೋಜನ ಪಡೆಯಲಾಗುತ್ತಿದೆ ಎಂದು ಹೇಳಿಕೊಂಡರೂ, ಕಾರ್ಯಪಡೆಯಲ್ಲಿ ಯುವಜನತೆಯ ಪ್ರಾತಿನಿಧ್ಯ ಅತ್ಯಂತ ಕನಿಷ್ಟ ಮಟ್ಟದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರು ಮತ್ತು ಪುರುಷರಿಗೆ ಹೋಲಿಸಿದರೆ, ನಗರದಲ್ಲಿ ವಾಸಿಸುತ್ತಿರುವ ಮಹಿಳೆಯರಲ್ಲಿ ನಿರುದ್ಯೋಗದ ಪ್ರಮಾಣ ಅಧಿಕವಾಗಿದೆ. ಸರಕಾರದ ಘೋಷಣೆ ಹಾಗೂ ಕಾರ್ಯನೀತಿಯ ಉಪಕ್ರಮದ ಹೊರತಾಗಿಯೂ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಅತ್ಯಂತ ಕನಿಷ್ಟ ಮಟ್ಟದಲ್ಲೇ ಮುಂದುವರಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News