×
Ad

ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರ ಧ್ವಂಸ ಖಂಡಿಸಿ ಕೂಳೂರಿನಲ್ಲಿ ಪ್ರತಿಭಟನೆ

Update: 2022-02-08 21:49 IST

ಮಂಗಳೂರು, ಫೆ.8: ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಗುಡ್ಡೆಯ ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮಂಗಳವಾರ ಕೂಳೂರು ಜಂಕ್ಷನ್‌ನಲ್ಲಿ ಕ್ರೈಸ್ತರು ಪ್ರತಿಭಟನೆ ನಡೆಸಿದರು.

ಕೋಮುವಾದಿ ಸಂಘಟನೆಗಳನ್ನು ಸಹಬಾಳ್ವೆಗೆ ಘರ್‌ವಾಪಸ್ ಮಾಡಿ, ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ಭೇದಭಾವ ಮಾಡಬೇಡಿ, ಮತಾಂಧತೆ ಅಳಿಸಿ-ಮನುಷ್ಯತ್ವ ಬೆಳೆಸಿ, ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸಬೇಡಿ ಇತ್ಯಾದಿ ಬರಹಗಳುಲ್ಲ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಅಲ್ಲದೆ ಕ್ಯಾಂಡಲ್ ಉರಿಸಿ ನ್ಯಾಯಕ್ಕಾಗಿ ಆಗ್ರಹಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಕ್ರೈಸ್ತರು ಸದಾ ಶಾಂತಿಪ್ರಿಯರು. ದ್ವೇಷಿಗಳಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮತಾಂಧರು ಕ್ರೈಸ್ತರನ್ನು ಕೆಣಕುತ್ತಿದ್ದಾರೆ. ಉರುಂದಾಡಿ ಗುಡ್ಡೆಯ ಪ್ರಾರ್ಥನಾ ಕೇಂದ್ರವನ್ನು ಉದ್ದೇಶಪೂರ್ವಕವಾಗಿ ಧ್ವಂಸ ಮಾಡಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆಯ ಕೈವಾಡವೂ ಇದೆ ಎಂದು ಆಪಾದಿಸಿದರು.

ಸ್ಥಳದಲ್ಲಿ ಅಹಿತಕರ ಘಟನೆ ನಡೆಯುವ ಮುನ್ಸೂಚನೆ ನೀಡಿದರೂ ಕೂಡ ಕಾವೂರು ಪೊಲೀಸರು ನಿರ್ಲಕ್ಷ ತಾಳಿದರು. ಜೆಸಿಬಿ ಮೂಲಕ ಪ್ರಾರ್ಥನಾ ಕೇಂದ್ರವನ್ನು ಧ್ವಂಸ ಮಾಡಿ ಮೂರು ದಿನವಾದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಪ್ರಾರ್ಥನಾ ಕೇಂದ್ರದಲ್ಲಿದ್ದ ಬೈಬಲ್ ಸಹಿತ ಸೊತ್ತುಗಳನ್ನು ಕಳವು ಮಾಡಿದರೂ ಕ್ರಮ ಜರಗಿಸಿಲ್ಲ ಎಂದು ರಾಯ್ ಕ್ಯಾಸ್ಟಲಿನೋ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಮಾತನಾಡಿ ಪ್ರಾರ್ಥನಾ ಕೇಂದ್ರದ ಧ್ವಂಸಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಪ್ರಾರ್ಥನಾ ಕೇಂದ್ರಕ್ಕೆ ರಕ್ಷಣೆ ನೀಡಿಲ್ಲ. ಹಾಗಾಗಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಮೇಲೂ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೂಳೂರು ಚರ್ಚ್‌ನ ಧರ್ಮಗುರು ವಿನ್ಸೆಂಟ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಸ್ಟಾನಿ ಆಲ್ವಾರೀಸ್, ಲಾರೆನ್ಸ್ ಡಿಸೋಜ, ಸಂತ ಆ್ಯಂಟನಿ ಹಾಲಿ ಕ್ರಾಸ್ ಬಿಲ್ಡಿಂಗ್ ಸಮಿತಿಯ ಅಧ್ಯಕ್ಷ ಆ್ಯಂಟನಿ ಲೋಬೋ, ಕೂಳೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮಾಬೆಲ್ ಬೆನ್ನೀಸ್, ಕೆಥೋಲಿಕ್ ಸಭಾದ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಟಾನಿ ಲೋಬೋ, ಐಸಿವೈಎಂ ಸೆಂಟ್ರಲ್ ಕೌನ್ಸಿಲ್ ಅಧ್ಯಕ್ಷ ಜೈಸನ್ ಕ್ರಾಸ್ತ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News