ರಾಷ್ಟ್ರ ಧ್ವಜ ಸ್ತಂಭದಲ್ಲಿ ಕೇಸರಿ ಪತಾಕೆ ಹಾರಾಟಕ್ಕೆ ಖಂಡನೆ
ಮಂಗಳೂರು, ಫೆ.9: ಹಿಜಾಬ್ ವಿಚಾರದಲ್ಲಿ ರಾಜ್ಯಾದ್ಯಂತ ಸಂಘಪರಿವಾರ ಮತ್ತು ಎಬಿವಿಪಿ ಸಂಘಟನೆಗಳು ನಡೆಸುತ್ತಿರುವ ಅಹಿತರಕ ಘಟನೆಗಳ ಮಧ್ಯೆಯೇ ಶಿವಮೊಗ್ಗದ ಕಾಲೇಜೊಂದರ ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಪತಾಕೆ ಹಾರಾಟ ಮಾಡಿರುವ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.
*ಮುಸ್ಲಿಂ ಒಕ್ಕೂಟ: ಅನೇಕ ವರ್ಷಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುತ್ತಾ ಬರುತ್ತಿರುವ ಹಿಜಾಬ್ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕುತಂತ್ರದಿಂದ ವಿವಾದಕ್ಕೀಡಾಗಿದೆ. ಹಿಜಾಬ್ ಮುಂದಿಟ್ಟು ರಾಜ್ಯಾದ್ಯಂತ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಶಿವಮೊಗ್ಗದ ಕಾಲೇಜಿನ ರಾಷ್ಟ್ರ ಧ್ವಜ ಸ್ತಂಭದಲ್ಲಿ ಕೇಸರಿ ಪತಾಕೆಯನ್ನು ಹಾರಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.
*ಮುಸ್ಲಿಂ ವರ್ತಕರ ಸಂಘ: ರಾಷ್ಟ್ರಧ್ವಜದಲ್ಲಿ ಕೇಸರಿ ಪತಾಕೆಯನ್ನು ಹಾರಿಸುವ ಮೂಲಕ ಎಬಿವಿಪಿ ಕಾರ್ಯಕರ್ತರು ದೇಶದ ನ್ಯಾಯ ಮತ್ತು ಕಾನೂನು ಪಾಲಕರಿಗೆ ಸವಾಲು ಹಾಕಿದ್ದಾರೆ. ರಾಷ್ಟ್ರದ್ರೋಹದ ಈ ಕೃತ್ಯದ ವಿರುದ್ಧ ಪ್ರಮುಖ ಮಾಧ್ಯಮಗಳು ಲಘುವಾಗಿ ಪರಿಗಣಿಸಿರುವುದು ಅಚ್ಚರಿ ಹುಟ್ಟಿಸಿದೆ. ಸರಕಾರ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಠಿಣ ಕ್ರಮ ಜರಗಿಸಬೇಕು ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.