×
Ad

ಎಬಿವಿಪಿ ಪುಂಡಾಟಿಕೆ ಮರೆಮಾಚಲು ಸಾಧ್ಯವಿಲ್ಲ: ಕ್ಯಾಂಪಸ್ ಫ್ರಂಟ್

Update: 2022-02-11 22:08 IST

ಮಂಗಳೂರು, ಫೆ.11: ಉಡುಪಿ ಸಹಿತ ಇತರ ಜಿಲ್ಲೆಗಳ ಕೆಲವೊಂದು ಕಾಲೇಜುಗಲಲ್ಲಿ ಮುಗ್ದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಎಬಿವಿಪಿ ನಡೆಸಿದ ಪುಂಡಾಟಿಕೆಯನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ, ಎಬಿವಿಪಿಯ ಪುಂಡಾಟಿಕೆಯನ್ನು ಮರೆಮಾಚಲು ಸಂತ್ರಸ್ತ ವಿದ್ಯಾರ್ಥಿನಿಯರು ಕ್ಯಾಂಪಸ್ ಫ್ರಂಟ್ ಪರವಾಗಿ ಮಾಡಿದ್ದ ಟ್ವೀಟ್‌ಗಳನ್ನು ಬಳಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸಂತ್ರಸ್ತ ವಿದ್ಯಾರ್ಥಿನಿಯರ ವೈಯಕ್ತಿಕ ದಾಖಲೆಗಳನ್ನೂ ಸಾರ್ವಜನಿಕವಾಗಿ ಸೋರಿಕೆ ಮಾಡಿರುವ ಗಂಭೀರ ಅಪರಾಧದ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ತೆರೆಮರೆಗೆ ಸರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಮೊದಲು ಕೇಸರಿ ಶಾಲು ಧರಿಸಿ ಕಾಲೇಜು ಕ್ಯಾಂಪಸ್ ಮತ್ತು ವಾಹನಗಳಿಗೆ ಕಲ್ಲು ತೂರಾಟ, ಧ್ವಜಸ್ತಂಭದಲ್ಲಿ ಕೇಸರಿ ಪತಾಕೆ ಅಳವಡಿಕೆ, ವಿದ್ಯೆ ಕಲಿಸಿದ ಶಿಕ್ಷಕರ ಮೇಲೆ ಹಲ್ಲೆ, ಕೇಸರಿ ಶಾಲು ಹಾಕಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಹಲ್ಲೆ, ಚೂರಿ ಇರಿತ ಮೊದಲಾದ ದುಷ್ಕೃತ್ಯಗಳ ಮೂಲಕ ಎಬಿವಿಪಿ ಕಾಲೇಜು ವಿದ್ಯಾರ್ಥಿಗಳನ್ನು ಗೂಂಡಾಗಳಾಗಿ ಬಳಸಿಕೊಂಡಿದೆ. ಕೃತ್ಯದಲ್ಲಿ ಭಾಗಿಯಾದ ಕೆಲವು ವಿದ್ಯಾರ್ಥಿಗಳ ಮೇಲೆ ಪ್ರಕರಣವೂ ದಾಖಾಗಿದ. ಇಂತಹ ಪರಿಸ್ಥಿತಿಯಲ್ಲಿ ಪೋಷಕರಿಂದ ಎಬಿವಿಪಿ ವಿರುದ್ಧ ಸಹಜವಾದ ಆಕ್ರೋಶ ವ್ಯಕ್ತವಾಗಿದೆ. ಇದೀಗ ಸಂತ್ರಸ್ತ ವಿದ್ಯಾರ್ಥಿನಿಯರು ಮತ್ತು ಕ್ಯಾಂಪಸ್ ಫ್ರಂಟ್ ವಿರುದ್ಧ ಇಂತಹ ತೇಜೋವಧೆಯ ಅಭಿಯಾನ ನಡೆಸುತ್ತಿರುವುದು ತಮ್ಮ ದುಷ್ಕೃತ್ಯವನ್ನು ಬದಿಕೆ ಸರಿಸುವ ಪಿತೂರಿ. ಪ್ರಜ್ಞಾವಂತ ನಾಗರಿಕರು ಇಂತಹ ಪಿತೂರಿಗಳಿಗೆ ಕಿವಿಗೊಡದೆ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News