ಮಂಗಳೂರು: ಗಾಂಜಾ ಸಾಗಾಟ; ಕಾರು ಸಹಿತ ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಫೆ.16: ತಲಪಾಡಿ ಸಮೀಪದ ಕೇರಳದ ಕುಂಜತ್ತೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಕಾರು ಸಹಿತ ಗಾಂಜಾವನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ಸಮೀಪದ ಹೊಸಂಗಡಿಯ ಪ್ರಫುಲ್ ರಾಜ್ (23) ಮತ್ತು ಸಜಿಪ ಗ್ರಾಮದ ಬೋಳಿಯಾರ್ ಸಮೀಪದ ಅವಿನಾಶ್ (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2.220 ಕೆಜಿ ತೂಕದ ಗಾಂಜಾ, ನಗದು 1,200 ರೂ. 2 ಮೊಬೈಲ್ ಫೋನ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 5,50,400 ರೂ. ಎಂದು ಆಂದಾಜಿಸಲಾಗಿದೆ.
ಆರೋಪಿಗಳ ಪೈಕಿ ಅವಿನಾಶ್ ಈ ಹಿಂದೆ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ವಾಹನ ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಕಾರಿನಲ್ಲಿ ಗಾಂಜಾವನ್ನು ಕೇರಳದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿತ್ತು. ಸಿಸಿಬಿ ಎಸ್ಸೈಗಳಾದ ರಾಜೇಂದ್ರ ಬಿ, ಪ್ರದೀಪ ಟಿಆರ್ ಹಾಗೂ ಸಿಸಿಬಿ ಸಿಬ್ಬಂದಿ ವರ್ಗವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.