ಇರಾನ್ ನಲ್ಲಿ ಶಾಲೆಗೆ ಅಪ್ಪಳಿಸಿದ ಯುದ್ಧವಿಮಾನ: ಒಟ್ಟು ಮೂವರು ಮೃತ್ಯು

Update: 2022-02-21 17:10 GMT

3 ಮಂದಿ ಮೃತ್ಯು ಟೆಹ್ರಾನ್, ಫೆ.21: ಇರಾನ್‌ನ ಎಫ್-5 ಯುದ್ಧವಿಮಾನವು ಸೋಮವಾರ ವಾಯವ್ಯದ ನಗರ ತಬ್ರೀರ್ನಲ್ಲಿನ ಶಾಲೆಯೊಂದರ ಆವರಣಕ್ಕೆ ಅಪ್ಪಳಿಸಿದ್ದು ವಿಮಾನದ ಇಬ್ಬರು ಸಿಬಂದಿಗಳು ಹಾಗೂ ಸ್ಥಳೀಯ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಮೊನಾಜೆಮ್ ಜಿಲ್ಲೆಯ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನದಲ್ಲಿ ತರಬೇತಿ ಸಿಬಂದಿಗಳಿದ್ದರು. ತರಬೇತಿ ಮುಗಿಸಿ ಬೆಳಿಗ್ಗೆ 9 ಗಂಟೆ(ಸ್ಥಳೀಯ ಕಾಲಮಾನ) ಸಮಯಕ್ಕೆ ಮೂಲನೆಲೆಗೆ ವಾಪಸಾಗುತ್ತಿದ್ದಾಗ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಪೂರ್ವ ಅಝರ್ಬೇನ್ ಪ್ರಾಂತದ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಮುಹಮ್ಮದ್ ಬಘೇರ್ ಮಾಹಿತಿ ನೀಡಿದ್ದಾರೆ.

ಶಾಲೆಯ ಹೊರ ಆವರಣದಲ್ಲಿನ ಕಂಪೌಂಡ್ ಮೇಲೆ ವಿಮಾನ ಪತನಗೊಂಡಿದ್ದು ಸಮೀಪದ ಮನೆಯಲ್ಲಿದ್ದ ವ್ಯಕ್ತಿ ಹಾಗೂ ವಿಮಾನದಲ್ಲಿದ್ದ ಇಬ್ಬರು ಸಿಬಂದಿ ಮೃತಪಟ್ಟಿದ್ದಾರೆ. ವಿಮಾನ ನೆಲಕ್ಕೆ ಅಪ್ಪಳಿಸಿದೊಡನೆ ಬೆಂಕಿಯ ಉಂಡೆ ಆಕಾಶಕ್ಕೆ ಚಿಮ್ಮಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ಹರಡದಂತೆ ನಿಯಂತ್ರಿಸಿದೆ . ಶಾಲೆಯ ಕಂಪೌಂಡ್‌ಗೆ ಹಾನಿಯಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಐಆರ್ಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.

ಇರಾನ್‌ನ ವಾಯುಪಡೆಯಲ್ಲಿ ಸುಮಾರು 300 ಯುದ್ಧವಿಮಾನಗಳಿದ್ದು ಇದರಲ್ಲಿ ಹೆಚ್ಚಿನವು ಸೋವಿಯತ್ ಒಕ್ಕೂಟದ ಅವಧಿಗೆ ಸೇರಿದ ಮಿಗ್-29 ಮತ್ತು ಸುಖೋಯ್-25 ಯುದ್ಧವಿಮಾನಗಳಾಗಿವೆ. ಇವುಗಳಲ್ಲಿ ಕೆಲವು ಯುದ್ಧವಿಮಾನಗಳು ಮಾತ್ರ ಸುಸ್ಥಿತಿಯಲ್ಲಿವೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News