×
Ad

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹೆಚ್ಚಿನ ಅಭ್ಯಾಸಕ್ಕೆ ಅಗತ್ಯ ಕ್ರಮ ವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2022-02-24 22:17 IST

ಮಂಗಳೂರು,ಫೆ.24: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರೀಕ್ಷಾ ಪೂರ್ವ ಅಭ್ಯಾಸ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇದ್ರ ಕೆ.ವಿ. ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ಪರಿಶೀಲನೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಬೇಕು. ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಅವರ ವಾಸಸ್ಥಾನದ ಸಮೀಪವಿರುವ ಸಮುದಾಯ ಭವನ ಅಥವಾ ಗ್ರಾಪಂ ಸಭಾಂಗಣದಲ್ಲಿ ಒಬ್ಬರು ಜವಾಬ್ದಾರಿ ಅಧಿಕಾರಿ ಅಥವಾ ನಿವೃತ್ತ ಶಿಕ್ಷಕರ ನೇತೃತ್ವದಲ್ಲಿ ಹೆಚ್ಚಿನ ಪರೀಕ್ಷೆಯ ಅಭ್ಯಾಸಗಳನ್ನು ಆಯೋಜಿಸುವುದಾದಲ್ಲಿ ಅದಕ್ಕೆ ಸೂಕ್ತ ಅವಕಾಶ ಮಾಡಿ ಕೊಡಲಾಗುವುದು ಎಂದು ಡಿಸಿ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಹಿಂದೆ ಕಳಪೆ ಸಾಧನೆ ಮಾಡಿದ ಶಾಲೆಗಳ ಪಟ್ಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ ಗೈರು ಹಾಜರಾಗುತ್ತಿರುವ ಮಕ್ಕಳ ಶಾಲಾವಾರು ಪಟ್ಟಿ ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪ್ರತಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಲಯದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಪೂರಕವಾಗುವ ವಿಶೇಷ ಚಟುವಟಿಕೆಯ ಮೂಲಕ ಅಭ್ಯಾಸ ಮಾಡಲು ಅಥವಾ ಸಾಹಿತ್ಯ ಅಭಿವೃದ್ಧಿ ಪಡಿಸುವುದಾದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಡಿಸಿ ಹೇಳಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಬರವಣಿಗೆಗೆ ಅಭ್ಯಾಸ ಮಾಡಲು ಬಫರ್ ಶೀಟ್ ಒದಗಿಸಲು ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬಫರ್ ಶೀಟ್‌ಗಳ ಸಂಖ್ಯೆ ಹಾಗೂ ಅದಕ್ಕೆ ಬೇಕಾಗುವ ಅನುದಾನದ ಮೊತ್ತದ ಬೇಡಿಕೆ ಸಲ್ಲಿಸುವಂತೆಯೂ ಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ (ಡಿಡಿಪಿಐ)ಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಪುತ್ತೂರು ತಾಲೂಕಿನಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವ ಬೇಡಿಕೆಗೆ ಎಸ್ಸೆಸ್ಸೆಲ್ಸಿ ಬೋರ್ಡ್ ಒಪ್ಪಿಗೆ ನೀಡಿದೆ. ಇದರಿಂದಾಗಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ 274 ಖಾಸಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News