ಮಾ.3ರಿಂದ 7ರವರೆಗೆ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

Update: 2022-02-28 06:48 GMT

ಪುತ್ತೂರು, ಫೆ.28: ಇತಿಹಾಸ ಪ್ರಸಿದ್ಧ ದೇಯಿ-ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.3ರಿಂದ ಮಾ.7ರ ತನಕ ಮೂಡುಬಿದಿರೆ ಶಿವಾನಂದ ಶಾಂತಿ ನೇತೃತ್ವದಲಿ ವೈದಿಕ ವಿಧಿ ವಿಧಾನಗಳೊಂದಿಗೆ ತೌಳವ ಪರಂಪರೆಯಂತೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ನೇಮೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿ ತಿಳಿಸಿದ್ದಾರೆ.

ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರೋತ್ಸವದ ಅಂಗವಾಗಿ ಮಾ.3ರಂದು ಮಧ್ಯಾಹ್ನ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಕಚೇರಿ ಬಳಿಯಿಂದ ಗೆಜ್ಜೆಗಿರಿ ಮೂಲಸ್ಥಾನಕ್ಕೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಮಾ.6ರಂದು ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸಚಿವರಾದ ವಿ.ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೇಯಿ-ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷ ಜಯಂತ ನಡುಬೈಲು, ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೆಜ್ಜೆಗಿರಿ ನೇಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News