×
Ad

​ಶಿರಾಡಿ ಸುರಂಗ ಮಾರ್ಗ ಕಾಮಗಾರಿ ಶೀಘ್ರವೇ ಆರಂಭ: ಸಚಿವ ನಿತಿನ್ ಗಡ್ಕರಿ

Update: 2022-02-28 22:02 IST

ಮಂಗಳೂರು, ಫೆ. 28: ಶಿರಾಡಿ ಘಾಟಿ ರಸ್ತೆ ಕರ್ನಾಟಕ ಮತ್ತು ಕೇರಳ ಭಾಗದ ಜನರ ಜೀವರಕ್ಷಕ ಸಂಚಾರ ಮಾರ್ಗವಾಗಿದ್ದು, ಇಲ್ಲಿ ಏಳು ಸುರಂಗ ಮತ್ತು ಏಳು ಸೇತುವೆಗಳ ಸುರಂಗ ಮಾರ್ಗವನ್ನು 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮೋದನೆ ಪಡೆಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ನಗರ ಕುಲಶೇಖರದ ಕೊರ್ಡೆಲ್ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 3163 ಕೋಟಿ ರೂ. ಮೊತ್ತದಲ್ಲಿ 164 ಕಿ.ಮೀ. ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸುರಂಗ ಮಾರ್ಗದ ತಜ್ಞ ಧರ್ಮಾಧಿಕಾರಿಯವರು ಹೈವೇಯ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಅಧ್ಯಯನ ನಡೆಸಿ, ಶೀಘ್ರವೇ ಡಿಪಿಆರ್ ಸಿದ್ಧಪಡಿಸಿ, ಇದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಶೀಘ್ರ ಅನುಮತಿ ಪಡೆಯಲು ಮುಖ್ಯಮಂತ್ರಿಯವರ ಸಹಕಾರ ಪಡೆದು ಕಾರ್ಯಕ್ಕೆ ಚಾಲನೆ ಶೀಘ್ರವೇ ನೀಡಲಾಗುವುದು. ಭಾರತ್‌ ಮಾಲ ಯೋಜನೆಯಡಿ ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ನವಮಂಗಳೂರು, ಕಾರವಾರ ಬಂದರುಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು. ಬೆಂಗಳೂರು- ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯ 26 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.

ಕರ್ನಾಟಕದ ಸಿಎಂ, ಸಚಿವರು, ಸಂಸದರು ನೀಡಿರುವ ಎಲ್ಲ ಬೇಡಿಕೆಗಳಿಗೆ ಅನುಮೋದನೆ ನೀಡಲಾಗುವುದು. ಅದರಲ್ಲಿ ಯಡಿಯೂರಪ್ಪ ಅವರ ಪ್ರಮುಖ ಕೆಲವು ಯೋಜನೆಗಳಿವೆ. ಸಂಸದ ನಳಿನ್ ಕುಮಾರ್ ಅವರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಹೇಳಿದ ಅವರು, ಸುರತ್ಕಲ್ ಟೋಲ್ ಸಮಸ್ಯೆಗೆ ದಿಲ್ಲಿಯಲ್ಲಿ ಸಭೆ ನಡೆಸಿ, ಮಾರ್ಗೋಪಾಯ ಸೂಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

14 ಆರ್‌ಒಬಿಗಳಿಗೆ ಮಂಜೂರಾತಿ

ದ.ಕ. ಜಿಲ್ಲೆಯಲ್ಲಿ 14 ರೈಲ್ವೇ ಮೇಲ್ಸೇತುವೆ (ಆರ್‌ಒಬಿ)ಗಳಿಗೆ ಮಂಜೂರಾತಿ ನೀಡುತ್ತಿದ್ದು, ಅದರ ಪಟ್ಟಿಯನ್ನು ಸಂಸದ ನಳಿನ್ ಕುಮಾರ್‌ಗೆ ನೀಡುವುದಾಗಿ ಹೇಳಿದ ಅವರು, ಮಂಗಳೂರಿಗೆ ಶೀಘ್ರದಲ್ಲಿ ರಿಂಗ್ ರೋಡ್ ದೊರೆಯಲ್ಲಿದ್ದು, ನಂತೂರು ಫ್ಲೈಓವರ್‌ಗೂ ಅನುಮತಿ ನೀಡುವುದಾಗಿ ಅವರು ಹೇಳಿದರು.

ಮುಂಬೈ - ಕನ್ಯಾಕುಮಾರಿ ವರೆಗೆ ಎಕ್ಸ್‌ಪ್ರೆಸ್ ಹೈವೆ ಆಗಲಿದ್ದು ಇದರಿಂದ ಈ ಭಾಗದಲ್ಲಿ ಅತಿ ವೇಗವಾಗಿ ಆರ್ಥಿಕ ಅಭಿವೃದ್ಧಿ ಆಗಲಿದೆ. ಪುಣೆ- ಬೆಂಗಳೂರು ನಡುವೆ ಹೈವೆ ನಿರ್ಮಾಣವಾಗಲಿದ್ದು ಇದರಿಂದಾಗಿ ಮೂರುವರೆ ಅಥವಾ 4 ಗಂಟೆಯೊಳಗೆ ಪುಣೆಯಿಂದ ಬೆಂಗಳೂರು ತಲುಪಬಹುದು. ಚೆನೈ - ಬೆಂಗಳೂರು ನಡುವೆ ಹೈವೆ ಕಾಮಗಾರಿ ಆರಂಭವಾಗಿದ್ದು ಇದರಿಂದಾಗಿ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪ ಬಹುದಾಗಿದೆ. ಈ ಹೆದ್ದಾರಿ ಕಾಮಗಾರಿಗಳಿಂದಾಗಿ ಕರ್ನಾಟಕ ದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

ಸುರತ್ಕಲ್ ಟೋಲ್ ರದ್ದು ಬಗ್ಗೆ ದೆಹಲಿಯಲ್ಲಿ ಸಭೆ

ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಪ್ಲಾಝಾ ರದ್ದು ಗೊಳಿಸುವ ನಿಟ್ಟಿನಲ್ಲಿ ಕೆಲವು ಕಾನೂನು ತೊಡಕುಗಳಿವೆ. ಈ ಸಮಸ್ಯೆ ಬಗೆಹರಿಸಲು ಶೀಘ್ರದಲ್ಲಿ ದೆಹಲಿಯಲ್ಲಿ ಸಭೆ ಕರೆಯಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಕಲ್ಪಿಸಲಾಗುವುದು. 2024ರ ಡಿಸೆಂಬರ್‌ಗೆ ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಅಮೆರಿಕದ ರಸ್ತೆಗಳಿಗೆ ಸಮನಾಗಿ ಅಭಿವೃದ್ಧಿಪಡಿಸಲಾಗುವುದು. ಭಾರತ್‌ ಮಾಲ ಎರಡನೇ ಹಂತದ ಬಳಿಕ ಈಗ ಪರ್ವತ್ ಮಾಲ ಮೂಲಕ ರೋಪ್ ವೇಯಂತ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News