ಈಶಾನ್ಯ ದಿಲ್ಲಿ ಹಿಂಸಾಚಾರದ ಹರಡುವಿಕೆಯನ್ನು ತಡೆಯಲು ದಿಲ್ಲಿ ಪೊಲೀಸರು ವಿಫಲರಾಗಿದ್ದರು: ಸತ್ಯಶೋಧನಾ ವರದಿ

Update: 2022-03-01 06:18 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚರ ಕುರಿತಂತೆ  ಸಮಾನಮನಸ್ಕ ನಾಗರಿಕರ ಮತ್ತು ಸಂಘಟನೆಗಳ ಗುಂಪೊಂದು ಸೋಮವಾರ ಸತ್ಯಶೋಧನಾ ವರದಿಯೊಂದನ್ನು ಪ್ರಸ್ತುತಪಡಿಸಿದೆ.

ಮಾಜಿ ರಾಯಭಾರಿ ದೇಬ್ ಮುಖರ್ಜಿ, ಮಾಜಿ ಗೃಹ ಕಾರ್ಯದರ್ಶಿ ಗೋಪಾಲ್ ಪಿಳ್ಳೈ, ಇತಿಹಾಸ ತಜ್ಞೆ ಮೃದುಲಾ ಮುಖರ್ಜಿ, ಹಿರಿಯ ಪತ್ರಕರ್ತೆ ಮತ್ತು ಸಂಶೋಧಕಿ ಪಮೇಲಾ ಫಿಲಿಪೋಸ್ ಮತ್ತು ಯೋಜನಾ ಆಯೋಗದ  ಮಾಜಿ ಸದಸ್ಯೆ ಸಯೀದಾ ಹಮೀದ್  ಈ ವರದಿಯನ್ನು ಪ್ರಸ್ತುತಪಡಿಸಿದ್ದಾರೆ.

ಗುಪ್ತಚರ ಮಾಹಿತಿಯಿದ್ದ ಹೊರತಾಗಿಯೂ ದಿಲ್ಲಿ ಪೊಲೀಸರು ಈ ಹಿಂಸಾಚಾರ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸರು ಸಂತ್ರಸ್ತರಿಗೆ ಕಿರುಕುಳ ನೀಡಿದ, ಅನಗತ್ಯ ಬಂಧನ ನಡೆಸಿದ, ಕೆಲವರನ್ನು ಬಂಧಿಸಲು ನಿರಾಕರಿಸಿದ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಕೆಲ ಪ್ರಭಾವಿಗಳ ವಿರುದ್ಧ ಕ್ರಮಕ್ಕೆ ಒಪ್ಪಿಲ್ಲ ಎಂದು ವರದಿ ಹೇಳಿದೆ.

ಸುಮಾರು 53 ಜನರ ಸಾವಿಗೆ ಹಾಗೂ 250ಕ್ಕೂ ಅಧಿಕ ಮಂದಿ ಗಾಯಾಳುಗಳಾದ ಈ ಹಿಂಸಾಚಾರ ಕುರಿತಂತೆ ಸೂಕ್ತ ತನಿಖೆ ನಡೆಸಲಾಗಿಲ್ಲ ಎಂದೂ ವರದಿ ಹೇಳಿದೆ.

ಈಶಾನ್ಯ ದಿಲ್ಲಿ ಹಿಂಸಾಚಾರದ ಕಟ್ಟುನಿಟ್ಟಿನ ಹಾಗೂ ನ್ಯಾಯೋಚಿತ ತನಿಖೆ ನಡೆಸಿದ್ದಾರೆಂದು ದಿಲ್ಲಿ ಪೊಲೀಸರನ್ನು ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ ಬೆನ್ನಲ್ಲೇ ಈ ವರದಿ ಹೊರಬಿದ್ದಿದೆ.

ಹಿಂಸಾಚಾರದ ಸಂತ್ರಸ್ತರಿಗೆ ಸೂಕ್ತ  ಪರಿಹಾರ ನೀಡಲು ದಿಲ್ಲಿ ಸರಕಾರ ವಿಫಲವಾಗಿದೆ ಹಾಗೂ ಸಂತ್ರಸ್ತರಿಗೆ ಉಂಟಾಗುವ ಕಿರುಕುಳ ತಪ್ಪಿಸಲು ಹಾಗೂ ನ್ಯಾಯಪರ ತನಿಖೆಗೆ ಒತ್ತು ನೀಡಲು  ಕೂಡ ಅದು ವಿಫಲವಾಗಿದೆ ಎಂದು ವರದಿ ಹೇಳಿದೆ.

ದಿಲ್ಲಿ ವಿಧಾನಸಭೆಯ ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯ ವರದಿಯ ಪ್ರಕಾರ ಜನವರಿ 18, 2021ರಲ್ಲಿದ್ದಂತೆ  ಪರಿಹಾರಕ್ಕಾಗಿ 3,425 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು ಹಾಗೂ 2,221  ಅರ್ಜಿಗಳನ್ನು ಅನುಮೋದಿಸಿ ರೂ 26,09,78,416 ಪರಿಹಾರಗಳನ್ನು ವಿತರಿಸಲಾಗಿದೆ. ಸರಕಾರಿ ಉದ್ಯೋಗಿಗಳಾಗಿದ್ದ ಇಬ್ಬರು ಸಂತ್ರಸ್ತರ ಪ್ರಕರಣದಲ್ಲಿ ರೂ 1 ಕೋಟಿ ಪರಿಹಾರ  ಒದಗಿಸಲಾಗಿದೆ ಎಂದೂ ಸಮಿತಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News