ದಲಿತ ಯುವಕನ ಕೊಲೆ ಪ್ರಕರಣ; ವೆಲ್ಫೇರ್ ಪಾರ್ಟಿ ಖಂಡನೆ
ಮಂಗಳೂರು, ಮಾ. 2: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಕನ್ಯಾಡಿಯಲ್ಲಿ ಬಜರಂಗ ದಳದ ಮುಖಂಡನಿಂದ ದಲಿತ ಯುವಕ ದಿನೇಶ್ ಎಂಬವರ ಕೊಲೆ ಪ್ರಕರಣದ ಬಗ್ಗೆ ರಾಜ್ಯ ಸರಕಾರವು ನಿರ್ಲಕ್ಷ ತಾಳಿರುವ ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯು ಖಂಡಿಸಿದೆ.
ರಾಜಕೀಯ ಲಾಭಗಳ ಲೆಕ್ಕಾಚಾರದಲ್ಲಿ ಆಡಳಿತ ವರ್ಗದ ರಾಜಕಾರಣಿಗಳಿಂದಲೇ ಸಮಾಜದ ಸಾಮರಸ್ಯ ಕದಡುವ ಪ್ರಯತ್ನ ಎಗ್ಗಿಲ್ಲದೆ ಸಾಗಿರುವುದು ವಿಷಾದನೀಯ. ಶಾಂತಿ, ಸೌಹಾರ್ದ ಬಯಸುವ ನಾಗರಿಕರೆಲ್ಲರಿಗೂ ಇದು ತುಂಬಾ ನೋವಿನ ಸಂಗತಿಯಾಗಿದೆ.
ಕೊಲೆ ಸಹಿತ ಎಲ್ಲಾ ಅಪರಾಧಗಳು ವಿಭಿನ್ನ ಮತ, ಧರ್ಮಗಳ ಜನರಿಂದ ನಡೆದರೆ ಮಾತ್ರ ಅದು ಮಾಧ್ಯಮ ಗಳಿಗೆ ಸುದ್ದಿಯಾಗುವುದು ಮತ್ತು ಹತ್ಯೆಯಾದವನ ಕುಟುಂಬಕ್ಕೆ ಸರಕಾರ ಸಹಿತ ಇತರ ಸಂಘಟನೆಗಳಿಂದ ಪರಿಹಾರ ಧನ ದೊರಕುತ್ತದೆ. ಆದರೆ ಸ್ವಧರ್ಮದ ಅಮಾಯಕನ ಕೊಲೆ ನಡೆದರೆ ಅದನ್ನು ಕೇಳುವವರೇ ಇಲ್ಲ ಎಂಬಂತಹ ವಾತಾವರಣ ನಿರ್ಮಾಣಗೊಂಡಿರುವುದು ವಿಪರ್ಯಾಸವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ದಿನೇಶ್ ಕನ್ಯಾಡಿ ಎಂಬ ದಲಿತ ಯುವಕನ ಕೊಲೆಯ ಬಗ್ಗೆ ಸರಕಾರ ಮೌನಕ್ಕೆ ಶರಣಾಗಿರುವುದು ಅಕ್ಷಮ್ಯ ವಾಗಿದೆ. ಸರಕಾರವು ಕೊಲೆ ರಾಜಕೀಯ ಮಾಡುವುದನ್ನು ಬಿಟ್ಟು ಹತ್ಯೆಯಾದ ದಿನೇಶ್ ಕನ್ಯಾಡಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಧನವನ್ನು ಒದಗಿಸಿ ಕೊಡಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಜರಗಿಸುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ವಕ್ತಾರ ಎಸ್.ಎಂ. ಮುತ್ತಲಿಬ್ ಒತ್ತಾಯಿಸಿದ್ದಾರೆ.