×
Ad

ರಸ್ತೆ ಅಪಘಾತ ಪ್ರಕರಣ: ಕಾರು ಚಾಲಕನಿಗೆ ಶಿಕ್ಷೆ

Update: 2022-03-02 22:54 IST

ಮಂಗಳೂರು, ಮಾ.2: ಮೂರು ವರ್ಷದ ಹಿಂದೆ ರಾ.ಹೆ.ಯಲ್ಲಿ ನಡೆದ ರಸ್ತೆ ಅಪಘಾತವೊಂದಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯವು ಆರೋಪಿ ಕಾರು ಚಾಲಕನಿಗೆ ಶಿಕ್ಷೆ ವಿಧಿಸಿದೆ.

2019ರ ಮಾ.10ರಂದು ಪ್ರಕಾಶ್ ಮತ್ತು ಪುರುಷೋತ್ತಮ್ ಎಂಬವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಉಜ್ಜೋಡಿ ಪೆಟ್ರೋಲ್ ಪಂಪ್ ಬಳಿ ಕುಲದೀಪ್ ವಿ. ಎಂಬಾತ ಚಲಾಯಿಸಿಕೊಂಡು ಬಂದಿದ್ದ ಕಾರು ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ಸವಾರ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಮಾ.20ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹಿಂಬದಿ ಸವಾರ ಪುರುಷೋತ್ತಮ್ ಗಂಭೀರ ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ನಿರೀಕ್ಷಕರಾದ ಕೃಷ್ಣನಂದ ಜಿ.ನಾಯ್ಕೆ ತನಿಖೆ ನಡೆಸಿದರೆ, ಮತ್ತೋರ್ವ ಪೊಲೀಸ್ ನಿರೀಕ್ಷಕ ಗುರುದತ್ ಕಾಮತ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 7ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಎಂ. ಅವರು ಆರೋಪಿ ಕುಲ್‌ದೀಪ್ ತಪ್ಪಿತಸ್ಥನೆಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ 279ರ ಅಡಿಯಲ್ಲಿ ಆರೋಪಕ್ಕೆ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 15 ದಿನಗಳ ಸಾದಾ ಕಾರಾಗೃಹ ವಾಸ, ಭಾರತೀಯ ದಂಡ ಸಂಹಿತೆ 338ರಡಿ ಆರೋಪಕ್ಕೆ 6 ತಿಂಗಳ ಕಾರಾಗೃಹ ವಾಸ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿಸಿದರೆ ಹೆಚ್ಚುವರಿ 15 ದಿನಗಳ ಸಾದಾ ಕಾರಾಗೃಹ ಹಾಗೂ ಭಾರತೀಯ ದಂಡ ಸಂಹಿತೆ 304(ಎ) ಅಡಿ ಆರೋಪಕ್ಕೆ 1 ವರ್ಷಗಳ ಸಾಮಾನ್ಯ ಕಾರಾಗೃಹ ವಾಸ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ 7ನೇ ಜೆಎಂಎಫ್‌ಸಿ ನ್ಯಾಯಾಲಯದ ಪ್ರಭಾರ ಹಿರಿಯ ಸರಕಾರಿ ಅಭಿಯೋಜಕ ವೆಹನ್ ಕುಮಾರ್ ಬಿ. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News