ಉಕ್ರೇನ್‌ ನಿಂದ ತೆರವು ಕಾರ್ಯಾಚರಣೆ ವೇಳೆ ಪ್ರಧಾನಿ ಮೋದಿಗೆ ಜೈಕಾರ ಹಾಕಿಸಿದ ಸಚಿವ: ವಿದ್ಯಾರ್ಥಿಗಳಿಂದ ಹಿಂದೇಟು

Update: 2022-03-03 15:53 GMT
Screengrab: ANI

ಹೊಸದಿಲ್ಲಿ: ಸಂಘರ್ಷಮಯ ಉಕ್ರೇನ್ ನೆಲದಿಂದ ನೆರವು ದೇಶಗಳಿಗೆ ತೆರಳಿರುವ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆ ವೇಳೆ ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಅಜಯ್‌ ಭಟ್‌ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ್ದು, ವಿದ್ಯಾರ್ಥಿಗಳು ಮೋದಿಗೆ ಜೈಕಾರ ಹಾಕಲು ಹಿಂದೇಟು ಹಾಕುತ್ತಿರುವ ದೃಶ್ಯ ಈಗ ಟ್ವಿಟರಿನಲ್ಲಿ ವ್ಯಾಪಕ ವೈರಲ್‌ ಆಗಿದೆ. 
 
ತೆರವು ಕಾರ್ಯಾಚರಣೆ ವೇಳೆ ಸಚಿವ ಅಜಯ್‌ ಭಟ್ ಭಾರತೀಯ ವಿದ್ಯಾರ್ಥಿಗಳನ್ನುದ್ದೇಶಿಸಿ‌ ಮಾತನಾಡುತ್ತಾ, ಪ್ರಧಾನಿ ಮೋದಿ ಹೆಸರು ಹೇಳಿ ಮೋದಿ ಮತ್ತು ಆಪರೇಷನ್ ಗಂಗಾ ಕುರಿತು ಐದು ನಿಮಿಷಗಳ ಕಾಲ ಹೊಗಳಿ ಭಾಷಣ ಮಾಡುತ್ತಾರೆ. ಮೋದಿಜಿಯವರ ಕೃಪೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ವೀಡಿಯೊವನ್ನು ANI ವರದಿ ಮಾಡಿದೆ.
  
ಕೊನೆಗೆ 'ಭಾರತ್ ಮಾತಾಕಿ ಜೈ ಘೋಷಣೆ ಕೂಗುತ್ತಾರೆ. ವಿದ್ಯಾರ್ಥಿಗಳು ಭಾರತ ಮಾತಾಕಿ ಘೋಷಣೆಗೆ ಹುಮ್ಮಸ್ಸಿನಿಂದ ಜೋರಾಗಿ ಜೈಕಾರ ಕೂಗುತ್ತಾರೆ. ಬಳಿಕ 'ಮಾನ್ಯ ಮೋದಿಜಿ ಕಿ ಜಿಂದಾಬಾದ್' ಎಂದು ಘೋಷಣೆ ಕೂಗುತ್ತಾರೆ. ಆದರೆ,  ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ʼಜಿಂದಾಬಾದ್‌ʼ ಕೂಗಲು ಹಿಂದೆ ಮುಂದೆ ನೋಡುತ್ತಾರೆ. ಭಾರತ ಮಾತೆಗೆ ಜೈಕಾರ ಕೂಗುವಾಗ ಇರುವ ಹುಮ್ಮಸ್ಸು, ಪ್ರಧಾನಿ ಮೋದಿಗೆ ಜೈಕಾರ ಹಾಕಲು ಇಲ್ಲದಿರುವ ವಿಡಿಯೋ ಈಗ ಟ್ವಿಟರಿನಲ್ಲಿ ಟ್ರೆಂಡ್‌ ಆಗುತ್ತಿದೆ.  

ಈಗಾಗಲೇ, ಯುದ್ಧಗ್ರಸ್ತ ಉಕ್ರೇನ್‌ನಿಂದ ಕಾಲ್ನಡಿಗೆ ಹಾಗೂ ಇತರೆ ಸಾರಿಗೆ ಸೌಲಭ್ಯ ಬಳಸಿ, ತಮ್ಮ ಸ್ವಂತ ಅಪಾಯದಲ್ಲಿ ಉಕ್ರೇನ್‌ ನೆರೆ ದೇಶಗಳಿಗೆ ತಲುಪಿದ ವಿದ್ಯಾರ್ಥಿಗಳನ್ನು ಆಪರೇಶನ್‌ ಗಂಗಾ ಮೂಲಕ ಕರೆ ತರಲಾಗುತ್ತಿದೆ ಎಂದು ವಿದ್ಯಾರ್ಥಿಗಳೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸ್ವತಃ, ಯುದ್ಧ ಭೂಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನೇ ನೇರವಾಗಿ ರಕ್ಷಿಸಿದಂತೆ ಸರ್ಕಾರ ಪ್ರಚಾರ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆ, ವಿದ್ಯಾರ್ಥಿಗಳಿಂದ ಪ್ರಧಾನಿ ಮೋದಿಗೆ ಜೈಕಾರ ಕೂಗಿಸಲು ಯತ್ನಿಸಿರುವುದು ಹಾಗೂ ಅದಕ್ಕೆ ವಿದ್ಯಾರ್ಥಿಗಳು ಹಿಂಜರಿದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಟ್ವಿಟರಿನಲ್ಲಿ ಇದು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದ್ದು, ದುರಂತಗಳನ್ನು ಕೂಡಾ ಅವಕಾಶಗಳನ್ನಾಗಿ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. 

ಈ ನಡುವೆ, ಸರಿಯಾದ ಊಟ, ವಸತಿ, ಸಾರಿಗೆ ಸೌಲಭ್ಯವಿಲ್ಲದೆ ತಮ್ಮನ್ನು ಅಪಾಯಕ್ಕೆ ಒಡ್ಡಿ ವಿದ್ಯಾರ್ಥಿಗಳು ಗಡಿ ದಾಟಿದ್ದಾರೆ. ಭಾರತ ಸರ್ಕಾರಕ್ಕಿಂತ ಪೋಲೆಂಡ್ ನಂತಹ ದೇಶ ವಿದ್ಯಾರ್ಥಿಗಳಿಗೆ ಆಶ್ರಯ ಅನ್ನ ನೀಡಿದೆ. ಸರ್ಕಾರ ಸಂಘರ್ಷವಿಲ್ಲದ ದೇಶಗಳಿಂದ ಮಾತ್ರ ವಿದ್ಯಾರ್ಥಿಗಳನ್ನು ಕರೆ ತರುತ್ತಿದೆ, ಈ ಕೆಲಸವನ್ನು ʼಸಾರಿಗೆ ಏಜೆಂಟ್‌ʼ ಕೂಡಾ ಮಾಡಬಲ್ಲರು, ಇದರಲ್ಲಿ ಭಾರತ ಸರ್ಕಾರದ ಔದಾರ್ಯವೇನು ಬಂತು.? ವಿದ್ಯಾರ್ಥಿಗಳು ಯಾಕೆ ಮೋದಿಗೆ ಜಿಂದಾಬಾದ್ ಹೇಳಬೇಕಿತ್ತು ಎಂಬ ಪ್ರಶ್ನೆಗಳೂ ಸಾಮಾಜಿಕ ತಾಣದಾದ್ಯಂತ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News