ಉಕ್ರೇನ್ - ರಶ್ಯಾ ಬಿಕ್ಕಟ್ಟಿನ ತನಿಖೆಗೆ ಸ್ವತಂತ್ರ ಆಯೋಗ ರಚನೆ ಕುರಿತ ಮತದಾನದಿಂದ ಮತ್ತೆ ದೂರ ಉಳಿದ ಭಾರತ

Update: 2022-03-05 04:28 GMT

ವಿಶ್ವಸಂಸ್ಥೆ: ಉಕ್ರೇನ್ ವಿರುದ್ಧ ರಶ್ಯಾದ ಆಕ್ರಮಣದ ಕುರಿತು ತನಿಖೆ ನಡೆಸಲು ಸ್ವತಂತ್ರ ಅಂತರಾಷ್ಟ್ರೀಯ ಸಮಿತಿಯನ್ನು ತುರ್ತಾಗಿ ರಚಿಸುವ ಕರಡು ನಿರ್ಣಯದ ಮೇಲೆ ಶುಕ್ರವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ(ಯುಎನ್ಎಚ್ಆರ್ಸಿ) ನಡೆಸಿದ ಮತದಾನದಿಂದ ಭಾರತ ಮತ್ತೆ ದೂರ ಉಳಿದಿದೆ ಎಂದು ವರದಿಯಾಗಿದೆ.

47 ಸದಸ್ಯರ ಸಮಿತಿಯಲ್ಲಿ 32 ದೇಶಗಳು ಕರಡು ನಿರ್ಣಯದ ಪರ ಮತ ಚಲಾಯಿಸಿದರೆ ರಶ್ಯಾ ಮತ್ತು ಎರೀಟಿಯಾ ದೇಶಗಳು ವಿರುದ್ಧ ಮತ ಚಲಾಯಿಸಿದವು. ಭಾರತ, ಚೀನಾ, ಪಾಕಿಸ್ತಾನ, ಸುಡಾನ್ ಮತ್ತು ವೆನೆಝುವೆಲಾ ಸೇರಿದಂತೆ 13 ದೇಶಗಳು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಅಮೆರಿಕ, ಬ್ರಿಟನ್, ಯುಎಇ, ನೇಪಾಲ, ಜಪಾನ್, ಜರ್ಮನಿ, ಫ್ರಾನ್ಸ್ ಸಹಿತ 32 ದೇಶಗಳು ನಿರ್ಣಯದ ಪರ ಮತ ಚಲಾಯಿಸಿವೆ. ಉಕ್ರೇನ್ ಮೇಲಿನ ರಶ್ಯಾ ಆಕ್ರಮಣದಿಂದ ಆಗಿರುವ ಬಿಕ್ಕಟ್ಟಿನ ಕುರಿತು ತನಿಖೆ ನಡೆಸಲು ಸ್ವತಂತ್ರ ಅಂತರಾಷ್ಟ್ರೀಯ ತನಿಖಾ ಆಯೋಗವನ್ನು ರಚಿಸಲು ಮಾನವ ಹಕ್ಕುಗಳ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಟ್ವೀಟ್ ಮಾಡಿದೆ.
ಉಕ್ರೇನ್-ರಶ್ಯಾ ಬಿಕ್ಕಟ್ಟಿಗೆ ಸಂಬಂಧಿಸಿ ಈ ಹಿಂದೆ 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ಮತ್ತು 193 ಸದಸ್ಯರ ಮಹಾಸಭೆಯ ಮತದಾನದಿಂದಲೂ ಭಾರತ ದೂರ ಉಳಿದಿದೆ.

ಉಕ್ರೇನ್ ಮೇಲಿನ ಆಕ್ರಮಣದ ವಿರುದ್ಧ ಧ್ವನಿ ಎತ್ತುವಂತೆ ಯೆಹೂದಿಗಳಿಗೆ ಝೆಲೆಂಸ್ಕಿ ಮನವಿ

ಉಕ್ರೇನ್ ಮೇಲೆ ರಶ್ಯಾ ನಡೆಸಿರುವ ಆಕ್ರಮಣವನ್ನು ಜಗತ್ತಿನಲ್ಲೆಡೆಯ ಯೆಹೂದಿ ಧರ್ಮೀಯರು ಗಟ್ಟಿ ಧ್ವನಿಯಲ್ಲಿ ಖಂಡಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹೀಬ್ರೂ ಭಾಷೆಯಲ್ಲಿ ಮನವಿ ಪೋಸ್ಟ್ ಮಾಡಿರುವ ಝೆಲೆಂಸ್ಕಿ, ರಶ್ಯಾ ಪಡೆ ಮಂಗಳವಾರ ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಬಾಬ್ರಿ ಯಾರ್ ಪ್ರದೇಶದ ಬಳಿ ಇರುವ ಟೆಲಿವಿಷನ್ ಟವರ್ ಧ್ವಂಸವಾಗಿದ್ದು, ಇದು ಉಕ್ರೇನ್ನ ಅಸ್ಮಿತೆಗೆ ರಶ್ಯಾದಿಂದ ಎದುರಾದ ಬೆದರಿಕೆಯ ಸಂಕೇತವಾಗಿದೆ . ನಾಝಿಗಳು ನಡೆಸಿದ್ದ ಸಾಮೂಹಿಕ ನರಮೇಧ(ಮೃತರಲ್ಲಿ ಹೆಚ್ಚಿನವರು ಯೆಹೂದಿಗಳು)ದ ಸ್ಮಾರಕಾರ್ಥ ಈ ಗೋಪುರ ನಿರ್ಮಿಸಲಾಗಿತ್ತು. ಈ ಅನ್ಯಾಯದ ವಿರುದ್ಧ ವಿಶ್ವದೆಲ್ಲೆಡೆಯ ಯೆಹೂದಿಗಳು ಧ್ವನಿ ಎತ್ತಬೇಕು . ಏನು ನಡೆದಿದೆ ಎಂಬುದನ್ನು ನೀವು ಗಮನಿಸಿಲ್ಲವೇ? ವಿಶ್ವದಾದ್ಯಂತದ ಯೆಹೂದಿಗಳು ಮೌನ ಮುರಿಯುವ ಕಾಲ ಈಗ ಸನ್ನಿಹಿತವಾಗಿದೆ. 

ಮೌನದಿಂದಲೇ ನಾಝೀವಾದ ಹುಟ್ಟಿಕೊಂಡಿದೆ. ಆದ್ದರಿಂದ ನಾಗರಿಕರ ಹತ್ಯೆ ವಿರುದ್ಧ ಧ್ವನಿ ಎತ್ತಿ, ಉಕ್ರೇನೀಯರ ಕೊಲೆಯ ವಿರುದ್ಧ ಧ್ವನಿ ಎತ್ತಿ ಎಂದವರು ಆಗ್ರಹಿಸಿದ್ದಾರೆ.
 ಝೆಲೆಂಸ್ಕಿ ಕೂಡಾ ಯೆಹೂದಿ ಜನಾಂಗದವರು. ಇಸ್ರೇಲ್ ನಲ್ಲಿ ತನ್ನ ಕುಟುಂಬದ ಸದಸ್ಯರಿದ್ದಾರೆ ಎಂದು ಹೇಳಿರುವ ಝೆಲೆಂಸ್ಕಿ ಹಲವು ಬಾರಿ ಇಸ್ರೇಲ್ ಗೆ ಭೇಟಿ ನೀಡಿದ್ದಾರೆ. 2020ರಲ್ಲಿ ‘ಟೈಮ್ಸ್ ಆಫ್ ಇಸ್ರೇಲ್’ಗೆ ನೀಡಿದ ಸಂದರ್ಶನದಲ್ಲಿ ಝೆಲೆಂಸ್ಕಿ, ಸೋವಿಯತ್ ಯೂನಿಯನ್ ನ ಬಹುತೇಕ ಯಹೂದಿ ಕುಟುಂಬಗಳು ಧಾರ್ಮಿಕವಾಗಿರಲಿಲ್ಲ. ಧರ್ಮ ಎಂಬುದು ವೈಯಕ್ತಿಕ ವಿಷಯವಾಗಿದೆ ಎಂದಿದ್ದರು. ಇಸ್ರೇಲ್ ನ ಪಶ್ಚಿಮ ದಂಡೆಯಲ್ಲಿ ಉಕ್ರೇನ್ ಧ್ವಜ ಹೊದ್ದುಕೊಂಡ ಜನರನ್ನು ಕಂಡು ಕೃತಜ್ಞನಾಗಿದ್ದೇನೆ. ಆದರೂ, ಇಸ್ರೇಲಿ ಸರಕಾರ ಇಸ್ರೇಲ್ ನ ಧ್ವಜವನ್ನು ಹೊದ್ದುಕೊಂಡಿದೆ ಎಂದು ತಾನು ಭಾವಿಸುವುದಿಲ್ಲ ಎಂದಿದ್ದರು. ಅಲ್ಲದೆ ಅಧ್ಯಕ್ಷರಾದ ಬಳಿಕ ಪ್ರಮಾಣವಚನವನ್ನು ಬೈಬಲ್ ಮೇಲೆ ಸ್ವೀಕರಿಸಿದ್ದರು.
ಆದರೆ, ಉಕ್ರೇನ್ ಮೇಲಿನ ರಶ್ಯಾ ಆಕ್ರಮಣದ ಬಳಿಕ, ಸಾಮಾಜಿಕ ಮಾಧ್ಯಮದಲ್ಲಿ ಝೆಲೆಂಸ್ಕಿ ಹಲವಾರು ಬಾರಿ ಯೆಹೂದಿ ಧರ್ಮದ ಬಗ್ಗೆ ಉಲ್ಲೇಖಿಸಿದ್ದಾರೆ ಮತ್ತು ಉಕ್ರೇನ್ ಅನ್ನು ಬೆಂಬಲಿಸುವಂತೆ ಯೆಹೂದಿಗಳಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News