ಅಮೆರಿಕದ ಅಧ್ಯಕ್ಷ ಬೈಡನ್ ಜತೆ ಉಕ್ರೇನ್ ಅಧ್ಯಕ್ಷ ಮಹತ್ವದ ಮಾತುಕತೆ

Update: 2022-03-06 02:23 GMT

ಕೀವ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಉಕ್ರೇನ್‌ಗೆ ಭದ್ರತೆ ಮತ್ತು ಹಣಕಾಸು ನೆರವು ನೀಡುವ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಪ್ರಕಟಿಸಿದ್ದಾರೆ.

ರಷ್ಯಾ- ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಮಾತುಕತೆ ವಿಶೇಷ ಮಹತ್ವ ಪಡೆದಿದೆ. ರಷ್ಯಾ ವಿರುದ್ಧ ಅಮೆರಿಕ ಹೇರಿರುವ ನಿರ್ಬಂಧ ಮುಂದುವರಿಸುವಂತೆ ಉಕ್ರೇನ್ ಅಧ್ಯಕ್ಷರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ನಿರಂತರ ಸಂವಾದದ ಅಂಗವಾಗಿ ಅಮೆರಿಕದ ಅಧ್ಯಕ್ಷರ ಜತೆ ಮತ್ತೊಂದು ಬಾರಿ ಚರ್ಚೆ ನಡೆಸಿದ್ದಾಗಿ ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ತಮ್ಮ ಪಡೆಗಳು ಹಿಡಿತ ಮುಂದುವರಿಸಿದ್ದು, ಕಳೆದ ಹತ್ತು ದಿನಗಳ ಯುದ್ಧದಲ್ಲಿ ರಷ್ಯನ್ ಸೇನೆಯ 10 ಸಾವಿರ ಮಂದಿಯನ್ನು ಹತ್ಯೆ ಮಾಡಿರುವುದಾಗಿ ಝೆಲೆಂಸ್ಕಿ ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ ಉಕ್ರೇನ್‌ನ ಪ್ರಮುಖ ನಗರವಾದ ಮರಿಯೊಪೋಲ್‌ನ ಮೇಯರ್ ಹೇಳಿಕೆ ನೀಡಿ, ರಷ್ಯಾ ನಗರಕ್ಕೆ ತಡೆ ಹಾಕಿದ್ದು, ಮಾನವೀಯ ಕಾರಿಡಾರ್ ತಡೆದಿದೆ ಎಂದು ಆಪಾದಿಸಿದ್ದಾರೆ. ನಗರಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೇಯರ್ ವದೀಮ್ ಬೈಚೆಂಕೊ ದೂರಿದ್ದಾರೆ. ನಗರದ ನಾಲ್ಕು ಲಕ್ಷ ನಿವಾಸಿಗಳನ್ನು ರಷ್ಯನ್ನರೊ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾಗಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.

ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮಾಧ್ಯಮ ನಿರ್ಬಂಧ ಕಾನೂನು ಜಾರಿಗೊಳಿಸಿರುವುದನ್ನು ಅಮೆರಿಕ ಕಟುವಾಗಿ ಟೀಕಿಸಿದೆ. ಮಾನವಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News