ಉಕ್ರೇನ್‍ ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸರಕಾರ ಉಚಿತ ಶಿಕ್ಷಣ ನೀಡಲಿ: ಕುಮಾರಸ್ವಾಮಿ ಆಗ್ರಹ

Update: 2022-03-07 07:37 GMT

ಬೆಂಗಳೂರು, ಮಾ.7: 'ಆಪರೇಷನ್‌ ಗಂಗಾ' ಹೆಸರಿನಲ್ಲಿ ಕೇಂದ್ರ ಸರಕಾರ ಉಕ್ರೇನ್‌ʼನಿಂದ ವಿದ್ಯಾರ್ಥಿಗಳನ್ನು ಏರ್‌ʼಲಿಫ್ಟ್‌ ಮಾಡಿದೆ ಎಂಬುದೇನೋ ಸರಿ. ಆದರೆ, ಆ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮತ್ತೆ ಆ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿನ ಶಿಕ್ಷಣ ಸಂಸ್ಥೆ, ವಿವಿಗಳನ್ನೂ ರಶ್ಯ ಸೇನೆ ಧ್ವಂಸ ಮಾಡಿದೆ ಎಂದು ಮಾಧ್ಯಮಗಳೇ ತೋರಿಸುತ್ತಿವೆ. ಕರ್ನಾಟಕದ 800-1000 ಮಕ್ಕಳು ಸೇರಿ ಭಾರತದ 20,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ತಾಯ್ನಾಡಿಗೆ  ಮರಳಿದ್ದಾರೆ. ಇನ್ನೂ ಕೆಲವರು ಬರುವವರಿದ್ದಾರೆ. ಅವರೆಲ್ಲರ ಶೈಕ್ಷಣಿಕ ಭವಿಷ್ಯದ ಪ್ರಶ್ನೆ ಏನು? ಪೋಷಕರು ಸಾಲ ಮಾಡಿ ಮಕ್ಕಳನ್ನು ಉಕ್ರೇನ್‌ʼಗೆ ಕಳಿಸಿದ್ದರು. ಯುದ್ಧದಿಂದ ಅವರ ಶಿಕ್ಷಣ ಅತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧಭೂಮಿಯಿಂದ ಜೀವ ಉಳಿಸಿಕೊಂಡು ಬಂದ ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತೆ ಕಟ್ಟಿಕೊಡುವುದು ಕೇಂದ್ರ ಸರಕಾರದ ಕರ್ತವ್ಯ. ಕರ್ನಾಟಕದಲ್ಲಿ 50-60 ವೈದ್ಯ ಕಾಲೇಜುಗಳಿವೆ. ಅಗತ್ಯಬಿದ್ದರೆ ಒಂದು ಪ್ರವೇಶ ಪರೀಕ್ಷೆ ನಡೆಸಿ ಇಷ್ಟೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿ. ಪ್ರತಿ ಕಾಲೇಜೂ ತಲಾ 10 ಮಕ್ಕಳಿಗಾದರೂ ಉಚಿತ ಶಿಕ್ಷಣ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

2,65,720 ಕೋಟಿ ರೂ.ಗಳಷ್ಟು ಬಜೆಟ್‌ ಗಾತ್ರದ ಕರ್ನಾಟಕಕ್ಕೆ 50ರಿಂದ 100 ಕೋಟಿ ರೂ. ಖರ್ಚು ಮಾಡುವುದು ಕಷ್ಟವೇ? ಈ ಮೊತ್ತದಲ್ಲಿ ಅರ್ಧಪಾಲನ್ನು ಕೇಂದ್ರ ಸರಕಾರವೇ ನೀಡಲಿ. ನೀಟ್‌ ಮೂಲಕ 50 ಶೇ. ಸೀಟುಗಳನ್ನು ಕೇಂದ್ರ ಇಟ್ಟುಕೊಳ್ಳುವುದಿಲ್ಲವೇ? ಎರಡೂ ಸರಕಾರಗಳು ಅಂತಃಕರಣದಿಂದ ಆಲೋಚಿಸಲಿ ಎನ್ನುವುದು ನನ್ನ ಅಭಿಪ್ರಾಯ ಎಂದವರು ಹೇಳಿದ್ದಾರೆ.

ʼವೈದ್ಯೋ ನಾರಾಯಣೋ ಹರಿಃʼ ಎಂದು ಹೇಳುತ್ತೇವೆ. ಇಷ್ಟು ವಿದ್ಯಾರ್ಥಿಗಳು ವೈದ್ಯರಾದರೆ ಎಷ್ಟು ಜನರ ಜೀವ ಉಳಿಸಬಲ್ಲರು, ರಾಜ್ಯಕ್ಕೆಷ್ಟು ಸೇವೆ ಸಲ್ಲಿಸಬಹುದು. 'ಹಣದ ಮೂಲಕ ಶಿಕ್ಷಣಕ್ಕೆ ಬೆಲೆಕಟ್ಟಿ ಮಕ್ಕಳ ಕನಸುಗಳ ಜತೆ ವ್ಯಾಪಾರೀಕರಣ ಮಾಡುವುದು ಬೇಡ' ಕೇಂದ್ರ-ರಾಜ್ಯ ಸರಕಾರಗಳು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News