×
Ad

ಬೆಳಗ್ಗಿನ ಸಮಯ ಬಿ.ಸಿ.ರೋಡ್ - ಮಂಗಳೂರು ವಿಶೇಷ ಸರಕಾರಿ ಬಸ್ ಸೌಲಭ್ಯಕ್ಕೆ ಸಿ.ಎಫ್‌.ಐ. ಮನವಿ

Update: 2022-03-07 21:05 IST

ಬಂಟ್ವಾಳ, ಮಾ.7: ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಬೆಳಗ್ಗಿ‌ನ ಸಮಯದಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ವಿಶೇಷ ಸರಕಾರಿ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ಘಟಕದ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳ ನೂರಾರು ವಿದ್ಯಾರ್ಥಿಗಳು ಮಂಗಳೂರಿನ ವಿವಿಧ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಪುತ್ತೂರು, ವಿಟ್ಲ, ಉಪ್ಪಿನಂಗಡಿ ಕಡೆಯಿಂದ ಬೆಳಗ್ಗಿನ ಸಮಯ ಬರುವ ಸರಕಾರಿ ಬಸ್ ಗಳು ಜನರಿಂದ ತುಂಬಿರುತ್ತದೆ. ಹೀಗಾಗಿ ಬಿ.ಸಿ.ರೋಡ್ ಬಳಿಕ ಬಸ್ ಹತ್ತುವ ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲಿ ಹಾಗೂ ಬಸ್ ನಲ್ಲಿ ನೇತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. 

ನೂಕು ನುಗ್ಗಲು ಹಾಗೂ ನೇತಾಡುತ್ತಾ ಹೋಗುವುದರಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತಲುಪಲು ತಡವಾಗುವುದಲ್ಲದೆ, ಪರೀಕ್ಷೆಗಳಿಗೆ ನಿಗದಿತ ಸಮಯಕ್ಕೆ ತಲುಪಲಾಗದೆ ಪರದಾಡುವ ಸ್ಥಿತಿ ನಡೆಯುತ್ತಿದೆ.  

ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಶಾಲಾ, ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ಆಗುವ ನಿಟ್ಟಿನಲ್ಲಿ ಬಿ.ಸಿ.ರೋಡಿನಿಂದ - ಮಂಗಳೂರಿಗೆ ಬೆಳಗ್ಗೆ 8ಕ್ಕೆ, 8:15ಕ್ಕೆ ಹಾಗೂ 8:30ಕ್ಕೆ ಮೂರು ವಿಶೇಷ ಬಸ್ ಗಳ ಸೌಲಭ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಕಾರ್ಯದರ್ಶಿ ಹಫಾಝ್, ಉಪಾಧ್ಯಕ್ಷ ಹಮ್ದಾನ್ ಮತ್ತು ನಿಝಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News