×
Ad

ಬೆಂಗಳೂರು: ಉದ್ಯೋಗ ಖಾಯಂಗೊಳಿಸಲು ಮಹಿಳಾ ಪೌರಕಾರ್ಮಿಕರ ಪ್ರತಿಭಟನೆ

Update: 2022-03-08 19:13 IST

ಬೆಂಗಳೂರು, ಮಾ.8: ಕಳೆದ ನಾಲ್ಕು ದಶಕಗಳಿಂದ ಪೌರಕಾರ್ಮಿಕರನ್ನು ಮತ್ತು ಮೇಲ್ವಿಚಾರಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳದೆ, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ನೇರವೇತನ ಆಧಾರದಲ್ಲಿಯೇ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಹೀಗೆ ಕಾರ್ಮಿಕರ ಶ್ರಮದ ಲಾಭಾಂಶವನ್ನು ಸರಕಾರವು ದೋಚುತ್ತಿರುವದನ್ನು ಹಾಗೂ ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಯ್ದೆಯಡಿ ಮೀಸಲಿಟ್ಟ ಅನುದಾನದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ, ಮಂಗಳವಾರದಂದು ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಮಹಿಳಾ ಪೌರಕಾರ್ಮಿಕರು ಪ್ರತಿಭಟನೆ ಮಾಡಿದರು. 

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾ ಸಂಘದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪಿ.ಎನ್. ಮುತ್ಯಾಲಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ಪೌರಕಾರ್ಮಿಕರು ಜೀತದ ಆಳುಗಳಂತೆ ದುಡಿಯುತ್ತಿದ್ದಾರೆ. ಆದರೆ ನಮ್ಮನಾಳುವ ಸರಕಾರಗಳು ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದಾಗಲೆಲ್ಲ, ಪ್ರತಿಭಟನಾಕಾರರನ್ನು ಶಾಂತಿಗೊಳಿಸಲು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರಕಾರಿ ಅಧಿಕಾರಿಗಳು ಸೇರಿದಂತೆ ಸಚಿವರು, ಮುಖ್ಯಮಂತ್ರಿಗಳು ನೀಡುತ್ತಾರೆ. ಆದರೆ ಯಾರು ಕಾರ್ಯ ಪ್ರವೃತ್ತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಲವಾರು ವರ್ಷಗಳ ಹೋರಾಟದ ಫಲವಾಗಿ 2017ರಲ್ಲಿ ಕೆಲವು ಪೌರಕಾರ್ಮಿಕರನ್ನು ನೇರವೇತನ ಕಾರ್ಮಿಕರಾಗಿ ಕೆಲಸ ಮಾಡುವಂತಹ ಅವಕಾಶ ದೊರೆಯಿತು. ಆದರೆ ಅವರನ್ನು ಖಾಯಂಗೊಳಿಸುವಲ್ಲಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ಕೂಡಲೇ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸುವವರೆಗೂ ಪೌರಕಾರ್ಮಿಕರ ವೇತನವನ್ನು 35,000 ರೂ.ಗಳಿಗೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸರಕಾರಕ್ಕೆ 15 ದಿನಗಳ ಗಡುವು ನೀಡಲಾಗುವುದು. ನಂತರ ವಿಧಾನಸೌಧ ಚಲೋಗೆ ಕರೆ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು. 

ಅಡ್ವೋಕೇಟ್ ಕೆ. ಬಾಲನ್ ಮಾತನಾಡಿ, ಬಿಬಿಎಂಪಿ ಮುಖ್ಯ ಆಯುಕ್ತರು ಕಾನೂನು ಸಲಹೆಗಾರರೊಂದಿಗೆ ಚರ್ಚೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಕಾನೂನಿನ ಚೌಕಟ್ಟಿನಲ್ಲಿ ಪೌರಕಾರ್ಮಿಕರನ್ನು ಕಾಯಂಗೊಳಿಸಬಹುದಾಗಿದೆ. ಕಳೆದ 4 ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ಇವರನ್ನು ಏಕೆ ಖಾಯಂ ಮಾಡಿ, ಸಂಬಳವನ್ನು ಹೆಚ್ಚಿಸಬಾರದು ಎಂದು ಪ್ರಶ್ನಿಸಿದರು. 

ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು, ಹೆಚ್ಚಾಗಿ ಮಹಿಳಾ ಪೌರ ಕಾರ್ಮಿಕರು ಭಾಗವಹಿಸಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದರು. 


ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರತಿವರ್ಷ ಬಜೆಟ್‍ನಲ್ಲಿ 26,000 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗುತ್ತದೆ. ಆದರೆ ಯೋಜನೆಗಳನ್ನು ಅನುಷ್ಠಾನ ಮಾಡದೆ, ಪರಿಶಿಷ್ಟ ಸಮುದಾಯದ ಮುಖಂಡರೊಂದಿಗೆ ಚರ್ಚಿಸದೆ, ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಸಾಮಾನ್ಯ ವರ್ಗಗಳ ಅಭಿವೃದ್ಧಿ ಕಾರ್ಯಗಳಿಗೂ ಉಪಯೋಗಿಸಿಕೊಳ್ಳುವಂತಹ ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಯ್ದೆಯ 7(ಡಿ) ಕಾಲಂ ಅನ್ನು ತಕ್ಷಣವೇ ರದ್ದುಗೊಳಿಸಬೇಕು. ಆ ಮೂಲಕ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು.

-ಪಿ.ಎನ್. ಮುತ್ಯಾಲಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾ ಸಂಘ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News