×
Ad

ಸ್ವಾವಲಂಬಿ ಕೃಷಿಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪೊಲೀಸ್ ಕಮಿಷನರ್ ಶಶಿಕುಮಾರ್

Update: 2022-03-11 22:35 IST

ಕೊಲ್ನಾಡು, ಮಾ.11: ಸರಕಾರ ಕೃಷಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಅದನ್ನು ಕಾರ್ಯಗತಗೊಳಿಸುವುದಿಲ್ಲ. ಕೃಷಿ ಈ ಹಿಂದೆ ಹೇಗಿತ್ತು, ಈಗ ಹೇಗಿದೆ ಮತ್ತು ಮುಂದೆ ಹೇಗಿದ್ದೀತು ಎಂಬ ಬಗ್ಗೆ ಕೃಷಿಕರು ಯೋಚಿಸಬೇಕಿದೆ. ಸ್ವಾವಲಂಬಿ ಕೃಷಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ದ.ಕ.ಜಿಲ್ಲೆಯಲ್ಲಿ ಭತ್ತ ಬೆಲೆಗೆ ಹೆಚ್ಚಿನ ಮಹತ್ವ ನೀಡಬೇಕಿತ್ತು. ಆದರೆ ಅದರ ಬದಲು ರೂಪಾಂತರಿ ಭತ್ತದ ಬೆಳೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇದರಿಂದ ಪೌಷ್ಠಿಕಾಂಶ ನಾಶವಾಗುತ್ತದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಅಭಿಪ್ರಾಯಪಟ್ಟರು.

ಕೃಷಿ ಮೇಳದ ವೇದಿಕೆಯಲ್ಲಿ ಪ್ರಗತಿಪರ ಕೃಷಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಅವರು ಸಂವಾದ ನಡೆಸಿ ಮಾತನಾಡಿದರು.

ನಾವು ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಜೇನು ಕೃಷಿ, ಹೈನುಗಾರಿಕೆ ಇತ್ಯಾದಿಗೆ ಮಹತ್ವ ನೀಡಬೇಕು. ಹೈನುಗಾರಿಕೆಯನ್ನು ಕೇವಲ ಹಾಲು ಉತ್ಪಾದನೆಗೆ ಮಾಡದೆ ಗೋವಿನ ಗೊಬ್ಬರ, ಸೆಗಣಿ, ಗೋಮೂತ್ರ ಇತ್ಯಾದಿಯಿಂದಲೂ ಕೃಷಿಕರು ಹೆಚ್ಚಿನ ಲಾಭ ಗಳಿಸಬಹುದು. ಕಾಲಕಾಲಕ್ಕೆ ಕೃಷಿಯ ಸ್ವರೂಪ ಬದಲಿಸಿ ರೈತರು ಸ್ವಾವಲಂಬಿ ಕೃಷಿಕರಾಗಿ ಬದಲಾಗಬಹುದು ಎಂದು ಶಶಿಕುಮಾರ್ ಹೇಳಿದರು.

ಸರಕಾರದಿಂದ ಸಿಗುವ ಸೌಲಭ್ಯ ಬಳಸಿಕೊಳ್ಳಿ

ಸರಕಾರ ಕೃಷಿಗೆ ನೀಡುವ ಸವಲತ್ತುಗಳನ್ನು ಸರಯಾಗಿ ಬಳಕೆ ಮಾಡಿದಲ್ಲಿ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಪ್ರವೀಣ್ ಕೆ. ಹೇಳಿದರು.

ಕೃಷಿಸಿರಿ 2022 ಕೃಷಿ ಸಮ್ಮೇಳನದಲ್ಲಿ ಕೇಂದ್ರಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಿಗುವ ಸವಲತ್ತು ಎಂಬ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿ ಬೆಳೆಗಳಿಗೆ ಅಗತ್ಯ ಪೋಷಕಾಂಶ ನೀಡಿದಾಗ ನೀರೀಕ್ಷಿತ ಫಸಲು ಪಡೆಯಬಹುದು, ಬೆಳೆಗಳಲ್ಲಿ ಸಸ್ಯ ಸಂರಕ್ಷಣೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ, ರಾಷ್ಟೀಯ ತೋಟಗಾರಿಕಾ ಮಿಶನ್ ಮೂಲಕ ಹೂವಿನ ಬೆಳೆ, ತರಕಾರಿ ಬೆಳೆಗೂ ಸಿಗುತ್ತದೆ, ಬೆಳೆ ಬೆಳೆಯುವ ಹಂತದಲ್ಲಿ ರೋಗ ಹತೋಟಿಗೆ ಹೆಕ್ಟೇರಿಗೆ 1,200 ರೂ.ಸಹಾಯಧನ ಪಡೆಯಬಹುದು. ಅಡಿಕೆ ಒಣಗಿಸಲು ಸೋಲಾರ್ ಪೆನೆಲ್ ಆಧಾರಿತ ಡ್ರಾಯರ್‌ಗೆ ಸಹಾಯಧನ ಸಿಗುತ್ತದೆ, ಕೊಯ್ಲೋತ್ತರ ನಿರ್ವಹಣ ಘಟಕಕ್ಕೆ , ಶೀತಲೀಕರಣ ಘಟಕ ಮತ್ತಿತರ ಕೃಷಿ ಸಂಬಂಧಿತ ಘಟಕಗಳಿಗೆ ಶೇ.25 ಸಹಾಯಧನ ನೀಡಲಾಗುವುದು, ರೈತರು ನರ್ಸರಿಯನ್ನೂ ಪ್ರಾರಂಭಿಸಿ ಸಹಾಯ ಧನ ಪಡೆಯಬಹುದಾಗಿದೆ ಎಂದರು.

ಮೊದಲ ವಿಚಾರಗೋಷ್ಠಿ 'ವಿಷಮುಕ್ತ ಆಹಾರ' ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅಡ್ಡೂರು ಕೃಷ್ಣರಾವ್ ನಾವೆಲ್ಲರೂ ಸಾವಯವ ಸಾಕ್ಷರರಾಗಬೇಕು. ಇಂದು ನಾವು ಸೇವಿಸುವ ಆಹಾರಗಳಲ್ಲಿ ವಿಷ ತುಂಬಿದೆ. ತರಕಾರಿ, ಹಾಲು, ಹಾಲಿನ ಉತ್ಪನ್ನಗಳು, ಬೇಕರಿ ಸಂಸ್ಕರಿತ ಆಹಾರ, ರಾಗಿ ಬೇಳೆಕಾಳು, ಭತ್ತ ಹೀಗೆ ಎಲ್ಲಾ ಆಹಾರಗಳಲ್ಲಿ ವಿಷ ತುಂಬಿದೆ. ಬೇಗನೆ ಲಾಭ ಗಳಿಸುವ ಉದ್ದೇಶದಿಂದ ಆಹಾರಕ್ಕೆ ವಿಷ ಬೆರೆಸಲಾಗುತ್ತಿದೆ. 2ನೇ ವಿಶ್ವಯುದ್ಧ ಸಂದರ್ಭದಲ್ಲಿ ಡಿಡಿಟಿ ಬಳಕೆಯನ್ನು ಪ್ರಾರಂಭಿಸಲಾಯಿತು. ಕೀಟಗಳ ನಾಶದ ಉದ್ದೇಶದಿಂದ ಡಿಡಿಟಿ ಬಳಕೆಯನ್ನು ಪ್ರಾರಂಭಿಸಿದರೆ ಇಂದು ನಾವು ತಿನ್ನುವ ಆಹಾರ ಬೆಳೆಸುವಲ್ಲಿ ಇದನ್ನು ಬೇಕಾಬಿಟ್ಟಿ ಬಳಕೆ ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ ಕಳೆದ ವರ್ಷ 7717 ಟನ್ ವಿಷಕಾರಿ ರಾಸಾಯನಿಕ ಬಳಕೆಯಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮ ಕಣ್ಣೆದುರು ಎಂಡೋಸಲ್ಫಾನ್ ದುರಂತ ಕಂಡಿದ್ದೇವೆ. ಇಂದಿಗೂ ಕೊಕ್ಕಡ, ಪೆರ್ಲದಲ್ಲಿ ದುರಂತಕ್ಕೆ ನಲುಗಿದ ಅನೇಕ ಕುಟುಂಬಗಳಿವೆ.

ಮೂರು ದಿನಗಳ ಕಾಲ ನಡೆಯುವ ಕೃಷಿ, ಜಾನಪದ ಜಾತ್ರೆಗೆ ಬಂದ ಅತಿಥಿಗಳು, ಕೃಷಿಕರು, ಕೃಷಿಯಾ ಸಕ್ತರನ್ನು ಶುಕ್ರವಾರ ಚೆಂಡೆ, ಕೊಂಬು ವಾದ್ಯ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು.

ಉಡುಪಿ ಪೇಜಾವರ ಮಠದ ವಿಶ್ವೇಶ ಪ್ರಸನ್ನ ತೀರ್ಥ ಸ್ವಾಮೀಜಿ ಗೋಪೂಜೆ ನೆರವೇರಿಸಿ ಪಂಜುರ್ಲಿ ವೇದಿಕೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ ಧ್ವಜಾರೋಹಣಗೈದು ಕೃಷಿ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮುಲ್ಕಿ ಅರಮನೆಯ ಅರಸ ದುಗ್ಗಣ್ಣ ಸಾವಂತ, ಚಂದ್ರಮೌಳೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾದೆಮನೆ ಜಯಂತ್ ರೈ, ಹಳೆಯಂಗಡಿ ಸಿಎಸ್‌ಐ ಚರ್ಚ್‌ನ ಧರ್ಮಗುರು ರೆ.ವಿನಯ್ ಬಂಗೇರ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಉತ್ರುಂಜೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಕದಿಕೆಯ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಪದ್ಮರಾಜ್ ಎಕ್ಕಾರ್, ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮ, ಭುವನಾಭಿರಾಮ ಉಡುಪ, ದ.ಕ.ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್,ತಾಲೂಕು ಅಧಿಕಾರಿ ಸುಜಯ ಭಂಡಾರಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕದ್ರಿ ನವನೀತ್ ಶೆಟ್ಟಿ, ತುಕಾರಾಂ ಪೂಜಾರಿ, ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News